Thursday, April 17, 2025
Google search engine

Homeರಾಜ್ಯಅಕ್ರಮ ಬಾಂಗ್ಲಾ ವಲಸಿಗರನ್ನು ಅವರ ದೇಶಕ್ಕೆ ಗಡಿಪಾರು ಮಾಡುತ್ತೇವೆ : ಪರಮೇಶ್ವರ್‌

ಅಕ್ರಮ ಬಾಂಗ್ಲಾ ವಲಸಿಗರನ್ನು ಅವರ ದೇಶಕ್ಕೆ ಗಡಿಪಾರು ಮಾಡುತ್ತೇವೆ : ಪರಮೇಶ್ವರ್‌

ಬೆಂಗಳೂರು: ನೆರೆಪೀಡಿತ ಪ್ರದೇಶಗಳಲ್ಲಿ ಅಗತ್ಯ ಪರಿಹಾರ ಕಾರ್ಯ ಕೈಗೊಳ್ಳಲು ರಾಜ್ಯಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ. ವಿರೋಧಪಕ್ಷದವರು ತಡವಾಗಿ ಎಚ್ಚೆತ್ತು ಕೊಂಡು ಬಾಧಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಸಂಕಷ್ಟಕ್ಕೀಡಾದ ಪ್ರದೇಶಗಳಲ್ಲಿ ಕ್ರಮ ಕೈಗೊಂಡಿದೆ. ಜಿಲ್ಲಾ ಸಚಿವರು ಈಗಾಗಲೇ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಜೊತೆಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದು, ಅಗತ್ಯ ಪರಿಹಾರಗಳನ್ನು ಕೊಡಿಸುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ-ಜೆಡಿಎಸ್‌‍ನವರು ಪಾದಯಾತ್ರೆ ನೆಪದಲ್ಲಿ ಸಂಕಷ್ಟ ಸ್ಥಳಗಳಿಗೆ ಭೇಟಿ ನೀಡುವುದಾಗಿ ಹೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಬಾಂಗ್ಲಾ ದೇಶದ ಅಕ್ರಮ ವಲಸಿಗರು ರಾಜ್ಯದಲ್ಲಿರುವುದು ಕಂಡುಬಂದರೆ ಅವರಲ್ಲಿ ಸೂಕ್ತ ದಾಖಲಾತಿಗಳು ಇಲ್ಲ ಎಂದು ಮನವರಿಕೆಯಾದರೆ ವಶಕ್ಕೆ ಪಡೆದು ದಿಗ್ಬಂಧನ ಕೇಂದ್ರದಲ್ಲಿರಿಸಲಾಗುವುದು. ನಂತರ ಅವರ ದೇಶಕ್ಕೆ ಮಾಹಿತಿ ನೀಡಿ ಗಡೀಪಾರು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಅಕ್ರಮ ವಲಸಿಗರ ವಿರುದ್ಧವಾಗಿ ಕ್ರಮ ಕೈಗೊಳ್ಳಲು ರಾಜಕೀಯ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ ಎಂದು ನಿವೃತ್ತ ಐಪಿಎಸ್‌‍ ಅಧಿಕಾರಿ ಭಾಸ್ಕರ್‌ ರಾವ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್‌, ಅವರು ಪೊಲೀಸ್‌‍ ಆಯುಕ್ತರಾಗಿದ್ದಾಗ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂಬುದು ಅವರದೇ ಹೇಳಿಕೆಯಿಂದ ಸಾಬೀತಾಗಿದೆ. ಆದರೆ ಈಗ ನಾವು ಕ್ರಮ ಕೈಗೊಳ್ಳುತ್ತಿದ್ದೇವೆ.

ವಿದೇಶಿಗರನ್ನು ಹೊಡೆದು , ಬಂಧಿಸಿ ಜೈಲಿನಲ್ಲಿಡಲಾಗುವುದಿಲ್ಲ. ರಾಜತಾಂತ್ರಿಕ ಮಾರ್ಗದಲ್ಲಿಯೇ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

ದೆಹಲಿಯ ಭೇಟಿಯ ವೇಳೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರು ಪ್ರತ್ಯೇಕವಾಗಿ ಸಂಸತ್ ವಿರೋಧಪಕ್ಷದ ನಾಯಕ ರಾಹುಲ್‌ಗಾಂಧಿಯವರನ್ನು ಭೇಟಿ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ದೆಹಲಿಗೆ ಹೋದಾಗಲೂ ಈ ರೀತಿ ಪ್ರತ್ಯೇಕವಾಗಿ ಸಾಕಷ್ಟು ಬಾರಿ ಭೇಟಿ ಮಾಡಿದ್ದೇವೆ. ಅದರಲ್ಲೇನೂ ವಿಶೇಷ ಇಲ್ಲ.

ಹೈಕಮಾಂಡ್‌ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರಿಗೆ ಮಾತ್ರ ಆಹ್ವಾನ ನೀಡಿದೆ. ಸಂಪುಟದ ಬೇರ್ಯಾವ ಸಚಿವರಿಗೂ ಆಹ್ವಾನ ಇಲ್ಲ ಎಂದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ರಕ್ಷಣೆಗೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಹಲವರ ಮೇಲೆ ದಾಳಿಗಳಾಗುವುದು, ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದು ಸಾಮಾನ್ಯ ಎಂದು ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧದ ಕಾರ್ಯಾಚರಣೆಗೆ ಪರಮೇಶ್ವರ್‌ ಪ್ರತಿಕ್ರಿಯಿಸಿದರು.

RELATED ARTICLES
- Advertisment -
Google search engine

Most Popular