Saturday, April 12, 2025
Google search engine

Homeರಾಜ್ಯಎಲ್ಲಾ ಕ್ಷೇತ್ರಗಳಿಗೂ 2000 ಕೋಟಿ ವಿತರಣೆ ಮಾಡುತ್ತೇವೆ: ಸಿಎಂ ಭರವಸೆ

ಎಲ್ಲಾ ಕ್ಷೇತ್ರಗಳಿಗೂ 2000 ಕೋಟಿ ವಿತರಣೆ ಮಾಡುತ್ತೇವೆ: ಸಿಎಂ ಭರವಸೆ

ಬೆಳಗಾವಿ: ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಹಣ ನೀಡುವಂತೆ ಕೇಳಿದ ಶಾಸಕರಿಗೆ 10 ಕೋಟಿಯಂತೆ ಸುಮಾರು 2000 ಕೋಟಿ ರೂ. ಅನುದಾನ ನೀಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು. ಮಂಗಳವಾರ ಬೆಳಗಾವಿ ಖಾಸಗಿ ಹೊಟೇಲ್​ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ (CLP) ಮಾತನಾಡಿದ ಅವರು, ರಸ್ತೆ ಅಭಿವೃದ್ಧಿಗೂ ಹಣ ನೀಡುವುದಾಗಿ ಹೇಳಿದರು.

ಸಭೆಯಲ್ಲಿ ಮಾತನಾಡಲು ಬಿಡದಿದ್ದಕ್ಕೆ ಶಾಸಕರು ಗರಂ

ಸಭೆಯಲ್ಲಿ ಮಾತನಾಡಲು ಅವಕಾಶ ನೀಡದಿದ್ದಕ್ಕೆ ಶಾಸಕರು ಗರಂ ಆಗಿದರು. ಶಾಸಕಾಂಗ ಸಭೆ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಯ್ತು ಅಂತ ಅಸಮಾಧಾನ ಹೊರಹಾಕಿದರು. ಅನುದಾನದ ವಿಚಾರವಾಗಿ ಚರ್ಚಿಸಲು ತಯಾರಾಗಿದ್ದ ಶಾಸಕರಿಗೆ ಭಾರೀ ನಿರಾಸೆಯಾಯಿತು. ಅನುದಾನ ಕೇಳಲು ಎದ್ದು ನಿಂತ ಶಾಸರಿಗೆ ಮುಂದೆ ನೋಡೋಣ ಅಂತ ಹೇಳಿ ಸಿಎಂ, ಡಿಸಿಎಂ ಸುದೀರ್ಘ ಭಾಷಣ ಮಾಡಿ ಶಾಸಕಾಂಗ ಸಭೆ ಅಂತ್ಯ ಮಾಡಿದರು.

ಅಧಿವೇಶನದಲ್ಲಿ ಪ್ರಸ್ತಾಪಿಸಲು ವಕ್ಫ್ ಹಾಗೂ ಪಂಚಮಸಾಲಿ ಮೀಸಲಾತಿ ಬಿಟ್ಟರೆ ಬಿಜೆಪಿಯವರಿಗೆ ಬೇರೇನೂ ವಿಚಾರ ಗೊತ್ತಿಲ್ಲ. ವಕ್ಫ್ ವಿಚಾರದಲ್ಲಿ ಸಚಿವ ಜಮೀರ್ ಅಹ್ಮದ್ ಒಳ್ಳೆಯ ಉತ್ತರ ಕೊಟ್ಟಿದ್ದಾರೆ. ದುಡ್ಡಿಲ್ಲ ದುಡ್ಡಿಲ್ಲ ಅಂತ ಹೇಳಬೇಡಿ, ನಮ್ಮ ಬಳಿ ದುಡ್ಡು ಇದೆ. ಬಿಜೆಪಿಯವರು ಸುಮ್ಮನೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ದುಡ್ಡು ಇಲ್ಲದೇ ಇದ್ದಿದ್ದರೇ ರೋಣದಲ್ಲಿ 200 ಕೋಟಿ ರೂ. ಕೆಲಸ ಮಾಡಲು ಆಗುತ್ತಿತ್ತಾ, ಸಚಿವ ಜಿ ಪರಮೇಶ್ವರ್ ಅವರ ಕ್ಷೇತ್ರದಲ್ಲಿ ಕೆಲಸ ಮಾಡಲು ಆಗುತ್ತಿತ್ತಾ ಎಂದರು.

ಬಿಜೆಪಿಯವರು ಅನುದಾನ ಇಲ್ಲ ಎಂದು ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಬಂಗಾರಪೇಟೆ ನಾರಾಯಣಸ್ವಾಮಿ ಏರು ಧ್ವನಿಯಲ್ಲಿ ಅನುದಾನ ಕೇಳಿದರು. “ಏ ನಾರಾಯಣಸ್ವಾಮಿ ಆಮೇಲೆ ಮಾತಾಡುತ್ತೇನೆ” ಎಂದು ಸಿಎಂ ಹೇಳಿದರು.

ಶಾಸಕ ನಾರಾಯಣಸ್ವಾಮಿ ಅನುದಾನ ಕೇಳುತ್ತಿದ್ದಂತೆ ಶಾಸಕ ವಿಜಯಾನಂದ ಕಾಶಪ್ಪನವರ್ ಕೂಡ ಅನುದಾನಕ್ಕೆ ಬೇಡಿಕೆ ಇಟ್ಟರು. ಆಗ ಸಿಎಂ ಸಿದ್ದರಾಮಯ್ಯ “ಕಾಶಪ್ಪನವರ್ ನೀನಾ… ನಾಮ ಹಾಕಿಕೊಂಡು ಬಂದಿಲ್ಲವಲ್ಲ” ಎಂದರು. ಈ ವೇಳೆ ಕೆಲ ಶಾಸಕರು “ಪರವಾಗಿಲ್ಲ, ಸಿಎಂ ನಾಮ ಹಾಕಿಕೊಂಡು ಬಂದಿಲ್ಲ ಎಂದು ಹೇಳುವ ಮೂಲಕ ನಮಗೆಲ್ಲ ನಾಮ ಹಾಕಿದರು” ಎಂದರು.

“ಕಳೆದ ಬಾರಿ ಘೋಷಣೆ ಮಾಡಿದ್ದ 25 ಕೋಟಿ ಅನುದಾನ ಬಂದಿಲ್ಲ ಎಂದು ಕೆಲ ಶಾಸಕರು ಹೇಳಿದರು. ಕೆಲವರಿಗೆ ಬಂದಿದೆ ಕೆಲವರಿಗೆ ಬಂದಿಲ್ಲ ಸರಿ ಹೋಗುತ್ತೆ. ಎಲ್ಲ ಶಾಸಕರಿಗೆ 10 ಕೋಟಿಯಂತೆ ಸುಮಾರು 2000 ಕೋಟಿ ರೂ. ಅನುದಾನ ನೀಡುತ್ತೇವೆ” ಎಂದು ಹೇಳಿದರು.

“ಮನೆ ಕಟ್ಟಲು ಸರ್ಕಾರ ಕೊಡುತ್ತಿರುವ ಅನುದಾನ ಕಡಿಮೆ ಇದೆ. ಈ ಅನುದಾನ ಹೆಚ್ಚಿಸಿ ಎಂದು ಕುಣಿಗಲ್ ಶಾಸಕ ಡಾ. ರಂಗನಾಥ್ ಮನವಿ ಮಾಡಿದರು. ಸಮಾಜ ಕಲ್ಯಾಣ ಇಲಾಖೆಯಲ್ಲಿ 30 ಸಾವಿರ ಕೋಟಿ ರೂ. ಇದೆ” ಎಂದು ಸಚಿವ ಮಹದೇವಪ್ಪ ಉತ್ತರ ನೀಡಿದರು. “ಎಲ್ಲಿದೆ ಸ್ವಿಸ್ ಬ್ಯಾಂಕ್​​ನಲ್ಲಿರಬೇಕು” ಎಂದು ಮತ್ತೊಬ್ಬ ಸಚಿವರು ಕಿಚಾಯಿಸಿದರು.

ಒಟ್ಟಿನಲ್ಲಿ ಅನುದಾನ ವಿಚಾರದ ಬಗ್ಗೆ ಸರ್ಕಾರವನ್ನು ಪ್ರಶ್ನಿಸಲು ತಯಾರಾಗಿದ್ದ ಶಾಸಕರಿಗೆ ಸಿಎಲ್‌ಪಿ ಸಭೆ ಭಾರೀ ನಿರಾಸೆ ಮೂಡಿಸಿತು.

RELATED ARTICLES
- Advertisment -
Google search engine

Most Popular