ಬಿಹಾರ: ಜಮ್ಮುಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿ ಸಂಬಂಧ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಉಗ್ರರನ್ನು ಹುಡುಕಿ ಹುಡುಕಿ ಹೊಡೆಯುತ್ತೇವೆ, ಉಗ್ರರಿಗೆ ಊಹಿಸಲಾಗದಂತಹ ಶಿಕ್ಷೆ ನಿಶ್ಚಿತ ಎಂದು ಹೇಳಿದ್ದಾರೆ.
ಬಿಹಾರದ ಮಧು ಬನಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಬಲಿಯಾದವರಿಗೆ ಸಂತಾಪ ಸೂಚಿಸಿದರು.
ಬಳಿಕ ಮಾತನಾಡಿದ ಅವರು, ಅಮಾಯಕ ಜನರನ್ನ ಉಗ್ರರು ಕೊಂದಿದ್ದಾರೆ. ಕನ್ನಡಿಗರು ಸೇರಿ ಹಲವು ಮಂದಿಯನ್ನ ಕೊಂದಿದ್ದಾರೆ. ಭಯೋತ್ಪಾದಕರಿಗೆ ತಕ್ಕ ಶಿಕ್ಷೆ ಕೊಡುತ್ತೇವೆ. ಉಗ್ರರನ್ನು ಹುಡುಕಿ ಹುಡುಕಿ ಹೊಡೆಯುತ್ತೇವೆ. ಉಗ್ರರಿಗೆ ತಕ್ಕ ಪಾಠ ಕಳಿಸುತ್ತೇವೆ. ಊಹಿಸಲು ಅಸಾಧ್ಯವಾದ ಶಿಕ್ಷೆ ನೀಡುತ್ತೇವೆ ಎಂದರು.
ಇದು ಪ್ರವಾಸಿಗರ ಮೇಲೆ ಆಗಿರುವ ದಾಳಿ ಮಾತ್ರ ಅಲ್ಲ ಭಾರತದ ಆತ್ಮದ ಮೇಲೆ ಆಗಿರುವ ದಾಳಿ. 142 ಕೋಟಿ ಭಾರತೀಯರ ಇಚ್ಚಾಶಕ್ತಿ ಉಗ್ರರ ಹುಟ್ಟಡಗಿಸಲಿದೆ. ಬಿಹಾರದ ನೆಲದಿಂದ ಎಚ್ಚರಿಕೆ ನೀಡುತ್ತೇನೆ. ಭಾರತವನ್ನ ಹೆದರಿಸೋಕೆ ಆಗುವುದಿಲ್ಲ. ಉಗ್ರರಿಗೆ ಶಿಕ್ಷೆ ಖಚಿತ ಎಂದು ನುಡಿದರು.