ನಂಜನಗೂಡು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯರವರು ೨ನೇ ಬಾರಿಗೆ ಮುಖ್ಯಮಂತ್ರಿಗಳಾದ ಮೇಲೆ ಜನರ ನಿರೀಕ್ಷೆ ಹೆಚ್ಚಾಗಿದ್ದು ಜನರ ನಿರೀಕ್ಷೆಗೆ ತಕ್ಕಂತೆ ಸರ್ಕಾರ ಕೆಲಸ ಮಾಡಲಿದೆ ಎಂದು ವರುಣಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ವರುಣಾ ಕ್ಷೇತ್ರದ ಬಸವನಪುರ, ಕೆಂಪಿಸಿದ್ದನಹುಂಡಿ ಗ್ರಾಮಗಳಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು ಕೆಂಪಿಸಿದ್ದನಹುಂಡಿ ಗ್ರಾಮದಲ್ಲಿನ ಜನರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ನೀಡಿದ್ದೀರಿ ಇದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಹಿಂದೆ ಬಂದಾಗ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದ್ದೀರಿ, ನಿಮ್ಮ ಎಲ್ಲಾ ಸಮಸ್ಯೆಗಳನ್ನು ಹಂತಹಂತವಾಗಿ ಬಗೆ ಹರಿಸುವುದಾಗಿ ತಿಳಿಸಿದರು.
ಕೆಂಪಿಸಿದ್ದನಹುಂಡಿ ಗ್ರಾಮದ ರಸ್ತೆಗಳನ್ನು ಕಾಂಕ್ರೀಟ್ ರಸ್ತೆ, ಚರಂಡಿಗಳ ನಿರ್ಮಾಣ, ರಸ್ತೆ ಡಾಂಬರೀಕರಣ ಮಾಡಿಕೊಡಬೇಕು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣ ಮಾಡಬೇಕು. ಮಾರಮ್ಮನ ದೇವಸ್ಥಾನ ಜೀರ್ಣೋದ್ಧಾರ ಮಾಡಿಕೊಡಬೇಕು. ಬೀದಿ ದೀಪಗಳು ನಿರಂತರವಾಗಿ ಉರಿಯುತ್ತಿವೆ ಇದನ್ನು ಸರಿಪಡಿಸಬೇಕು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೈಟೆಕ್ ಅಡಿಗೆಮನೆ, ಶಿಥಿಲಗೊಂಡಿರುವ ಶಾಲಾ ಕಟ್ಟಡಗಳನ್ನು ದುರಸ್ತಿಗೊಳಿಸಿಕೊಡಬೇಕು, ಪಶುವೈದ್ಯ ಆಸ್ಪತ್ರೆ ಬೇಕು, ಊರಿನ ಪಕ್ಕದಲ್ಲಿರುವ ಎರಡು ಬಾರ್‌ಗಳನ್ನು ತೆರವುಗೊಳಿಸಬೇಕು ಎಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ಬಿ.ಎಂ. ರಾಮು, ರೇವಮ್ಮ ಮಾಲೇಗೌಡ, ಲತಾಸಿದ್ದಶೆಟ್ಟಿ, ಕೆಂಪಣ್ಣ, ರಂಗಸ್ವಾಮಿ, ಮಹಾದೇವ, ಗ್ರಾ.ಪಂ. ಅಧ್ಯಕ್ಷ ರವಿ ನಂಜಯ್ಯ, ಶೃತಿ ಬೀರಯ್ಯ, ತಹಸೀಲ್ದಾರ ಶಿವಕುಮಾರ್, ಇ.ಓ. ರಾಜೇಶ್, ಪ್ರಕಾಶ್, ನವೀನ್, ಕುಮಾರ್, ಸ್ವರ್ಣಲತಾ, ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ವಿಜಯ್, ಶಿವಸ್ವಾಮಿ, ಪ್ರದೀಪ್‌ಕುಮಾರ್ ಹಾಗೂ ನಾಗರಾಜ್ ಹಾಜರಿದ್ದರು.