ಮಂಡ್ಯ: 150ನೇ ದಿನಕ್ಕೆ ಕಾವೇರಿ ಧರಣಿ ಅಂತ್ಯಗೊಳಿಸಿ ಈಗ ವಾರಕ್ಕೊಮ್ಮೆ ಚಳವಳಿ ಆರಂಭಿಸಲಾಗಿದ್ದು, CWRC-CWMA ಪ್ರಾಧಿಕಾರಗಳ ವಿರುದ್ಧ ಹೋರಾಟ ಮುಂದುವರಿಸಲಾಗಿದೆ.
ಮತ್ತೆ ತಮಿಳುನಾಡಿಗೆ 908 ಕ್ಯೂಸೆಕ್ ನೀರು ಬಿಡುಗಡೆಗೆ ಪ್ರಾಧಿಕಾರ ಆದೇಶ ನೀಡಿರುವ ಹಿನ್ನಲೆ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯಿಂದ ಬಿತ್ತಿ ಪತ್ರಗಳನ್ನು ಅಂಟಿಸುವ ಮೂಲಕ ಪ್ರತಿಭಟನೆ ನಡೆಸಲಾಗಿದೆ.
ರೈತ ಹಿತರಕ್ಷಣಾ ಸಮಿತಿ ವತಿಯಿಂದ ನಿರಂತರವಾಗಿ 150 ದಿನ ಕಾವೇರಿ ಧರಣಿ, ಉಪವಾಸ ಸತ್ಯಾಗ್ರಹ ನಡೆಸಲಾಗಿತ್ತು.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ನಿರಂತರ ಅನ್ಯಾಯ ಆಗುತ್ತಿದೆ. ಆಳುವ ಸರ್ಕಾರಗಳು ರೈತರಿಗೆ ನ್ಯಾಯ ದೊರಕಿಸಿಕೊಡಲು ಮುಂದಾಗುತ್ತಿಲ್ಲ. ತಮಿಳುನಾಡಿಗೆ ನಿರಂತರ ನೀರು ಹರಿಸಿದ ಪರಿಣಾಮ ಜಲಾಶಯಗಳಲ್ಲಿ ನೀರಿಲ್ಲದಂತಾಗಿದೆ. ರೈತರು ಬೆಳೆ ಹಾಕಬಾರದು ಎಂದು ಸರ್ಕಾರ ಘೋಷಿಸಿದೆ. ರೈತರಿಗೆ ಎರಡು ಬೆಳೆ ಕೈ ತಪ್ಪಿದೆ, ಜೊತೆಗೆ ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ 3600 ಕೋಟಿ ಬೆಳಗಿನಷ್ಟವಾಗಿದ್ದು. ಸರ್ಕಾರ ಈ ಕೂಡಲೇ ಬೆಳೆ ನಷ್ಟ ಪರಿಹಾರ ಪಾವತಿಸಬೇಕು ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು.
ಇದೇ ವೇಳೆ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ಬೋರಯ್ಯ, ಸುನಂದಾ ಜಯರಾಮ್,ರೈತ ಮುಖಂಡ ಇಂಡುವಾಳು ಚಂದ್ರಶೇಖರ್, ಮುದ್ದೆ ಗೌಡ, ಫಯಾಜ್, ನಾರಾಯಣಸ್ವಾಮಿ ಸೇರಿ ಹಲವರು ಭಾಗಿಯಾಗಿದ್ದರು.