ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನಗಣನೆ ಆರಂಭವಾಗಿದೆ. ಭಾನುವಾರವಷ್ಟೇ ಅರಣ್ಯ ಭವನದಿಂದ ಅರಮನೆಯಂಗಳಕ್ಕೆ ಪ್ರವೇಶ ಮಾಡಿದ್ದ ಆನೆಗಳಿಗೆ ನಾಳೆಯಿಂದ ತರಬೇತಿ ಪ್ರಾರಂಭವಾಗಲಿದೆ. ದಸರಾ ಗಜಪಡೆಗೆ ಇಂದು ತೂಕ ಪರಿಶೀಲನೆ ನಡೆಸಲಾಗಿದ್ದು, ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳ ತೂಕ ಪರೀಶೀಲನೆ ಮಾಡಲಾಗಿದೆ.
ಆನೆಗಳ ತೂಕದ ವಿವರ
ಅಭಿಮನ್ಯು – 5,360 ಕೆ ಜಿ
ಧನಂಜಯ – 5,310 ಕೆ ಜಿ
ಕಾವೇರಿ – 3,010 ಕೆ ಜಿ
ಲಕ್ಷ್ಮಿ – 3,730 ಕೆ ಜಿ
ಭೀಮ – 5,465 ಕೆ ಜಿ
ಏಕಲವ್ಯ – 5,305 ಕೆ ಜಿ
ಮಹೇಂದ್ರ – 5,120 ಕೆ ಜಿ
ಕಂಜನ್ – 4,880 ಕೆ ಜಿ
ಪ್ರಶಾಂತ – 5,110 ಕೆ ಜಿ
ತೂಕ ಪರೀಕ್ಷೆಯಲ್ಲಿ ಕ್ಯಾಪ್ಟನ್ ಅಭಿಮನ್ಯುವನ್ನೇ ಹಿಂದಿಕ್ಕಿದ ಭೀಮ ತಂಡದಲ್ಲೇ ಅತ್ಯಂತ ಹೆಚ್ಚಿನ ಬಲಶಾಲಿ ಆನೆ ಎಂದು ಸಾಬೀತು ಮಾಡಿದ್ದಾನೆ. ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಸಾಯಿರಾಮ್ ಅಂಡ್ ಕೊ., ಎಲೆಕ್ಟ್ರಾನಿಕ್ ತೂಕ ಮಾಪನ ಕೇಂದ್ರದಲ್ಲಿ ನಡೆದ ಆನೆಗಳ ತೂಕ ಪರಿಶೀಲನೆ ನಡೆಯಿತು. ತೂಕ ಪರಿಶೀಲನೆ ನಂತರ ಆನೆಗಳಿಗೆ ಪ್ರತಿನಿತ್ಯ ಪೌಷ್ಟಿಕ ಆಹಾರ ನೀಡಿ ತಯಾರಿ ಪ್ರಾರಂಭಿಸಲಾಗಿದ್ದು, ಈ ಮೂಲಕ ವಿಜಯದಶಮಿ ಜಂಬೂ ಸವಾರಿ ಮೆರವಣಿಗೆಗಾಗಿ ತಾಲೀಮು ಕಾರ್ಯಕ್ರಮಕ್ಕೆ ಸಿದ್ದತೆ ನಡೆಸಲಾಗಿದೆ.
ನಾಳೆಯಿಂದ ತಾಲೀಮು ಆರಂಭವಾಗಲಿದ್ದು, ಜಂಬೂಸವಾರಿ ಮೆರವಣಿಗೆ ಸಾಗಲಿರುವ ಮಾರ್ಗದಲ್ಲಿ ನಡೆಯಲಿರುವ ನಿತ್ಯ ತಾಲೀಮು ನಡೆಯಲಿದೆ. ಬೆಳಗ್ಗೆ ಮತ್ತು ಸಂಜೆ ಸೇರಿದಂತೆ ಎರಡು ಬಾರಿ ಅರಮನೆಯಿಂದ ಬನ್ನಿಮಂಟಪದವರೆಗೆ ಕರೆದೊಯ್ಯಲಿರುವ ಮಾವುತರು ನಗರದ ಸದ್ದುಗದ್ದಲಕ್ಕೆ ವಿಚಲಿತವಾಗದಂತೆ ಆನೆಗಳಿಗೆ ತರಬೇತಿ ನೀಡಲಿದ್ದಾರೆ.