ತುಮಕೂರು: ಸಹಜವಾಗಿ ತಿಂಡಿ ತಿನ್ನಲು ಬಂದಿದ್ದೇನೆ ಅಷ್ಟೇ. ಅದಕ್ಕೇನೂ ವಿಶೇಷ ಅರ್ಥ ಕಲ್ಪಿಸೋದು ಬೇಡ. ಜೊತೆಯಲ್ಲಿ ತಿಂಡಿ ತಿಂದು ಹಿರಿಯೂರಿಗೆ ಮದುವೆಗೆ ಹೋಗ್ತಿದ್ದೇವೆ. ವಿ.ಸೋಮಣ್ಣ ಮಠದ ಕಾರ್ಯಕ್ರಮಕ್ಕೆ ನಮ್ಮನ್ನ ಆಹ್ವಾನ ಮಾಡಿದ್ದಾರೆ. ನಾನು ಮತ್ತು ರಾಜಣ್ಣ ಹೋಗುತ್ತಿದ್ದೇವೆ ಎಂದು ಸಚಿವ ರಾಜಣ್ಣ ಮನೆಗೆ ಭೇಟಿ ಬಳಿಕ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸೋಮಣ್ಣ, ಲಿಂಬಾವಳಿ ಕಾಂಗ್ರೆಸ್ ಸೇರ್ಪಡೆಯಾಗ್ತಾರೆ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿ, ಅದು ಕೆಪಿಸಿಸಿ ಅಧ್ಯಕ್ಷರ ಮಟ್ಟದಲ್ಲಿ ನಡೆಯುತ್ತೆ. ನಮ್ಮ ಹಂತದಲ್ಲಿ ನಡೆಯೋದಿಲ್ಲ ಎಂದರು.
ತುಮಕೂರು ಲೋಕಸಭಾ ಚುನಾವಣೆ ಕುರಿತ ಪಕ್ಷದ ಸಭೆ ವಿಳಂಬವಾಗುತ್ತಿರುವ ವಿಚಾರ. ಕೃಷ್ಣಬೈರೇಗೌಡರನ್ನ ಜಿಲ್ಲೆಗೆ ಉಸ್ತುವಾರಿ ಮಾಡಲಾಗಿದೆ. ಅವರು ಬಂದು ಸಭೆಯನ್ನ ನಡೆಸುತ್ತಾರೆ. ಕಾರ್ಯಕರ್ತರ, ಮುಖಂಡರ ಸಭೆ ನಡೆಸಿ ಕೆಪಿಸಿಸಿಗೆ ವರದಿ ಕೊಡ್ತಾರೆ. ಆ ವರದಿಯನ್ನ ನೋಡಿಕೊಂಡು ಮುಂದಿನ ಬೆಳವಣಿಗೆ ನಡೆಯುತ್ತೆ. ಅವರು ಇಲ್ಲಿಯವರೆಗೆ ಸ್ವಲ್ಪ ಬ್ಯೂಸಿ ಇದ್ರು. ನಾನು ಕೂಡ ಅವರ ಜೊತೆ ಮಾತನಾಡಿದ್ದೇನೆ. ಶೀಘ್ರದಲ್ಲಿ ಸಭೆ ನಡೆಯಲಿದೆ ಎಂದರು.
ಇದೊಂದು ಸೌಹಾರ್ದಯುತ ಭೇಟಿ
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭೇಟಿ ಬಳಿಕ ಸಚಿವ ಕೆ.ಎನ್ ರಾಜಣ್ಣ ಮಾತನಾಡಿ, ಇದೊಂದು ಸೌಹಾರ್ದಯುತ ಭೇಟಿ. ಹಿರಿಯೂರಿನಲ್ಲಿ ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಹೀಗಾಗಿ ಜೊತೆಯಲ್ಲಿ ಹೋಗಲು ಬಂದಿದ್ದರು ಎಂದರು.
ಜಾತಿಗಣತಿ ವಿಚಾರವಾಗಿ ಮಾತನಾಡಿ, ಜಾತಿ ಗಣತಿ ವರದಿ ಬಂದಿಲ್ಲ. ವರದಿಯಲ್ಲಿ ಏನಿದೆ ಅಂತ ಗೊತ್ತಿಲ್ಲ. ಸುಮ್ನೆ ನೀರಿನೊಳಗೆ ಎಮ್ಮೆ ನಿಲ್ಲಿಸಿ ಹಾಲು ಕರೆದಂತೆ. ಅದು ಕೋಣಾನೋ, ಎಮ್ಮೆನೋ ಯಾರಿಗೆ ಗೊತ್ತು. ವರದಿ ಬಂದ ಬಳಿಕ ಆಗುಹೋಗುಗಳಿವೆ. ಯಾವುದು ಸರಿಯಿಲ್ಲ ಅಂತಾ ಸಾರ್ವಜನಿಕವಾಗಿ ಚರ್ಚೆ ಆಗುತ್ತೆ. ಸರ್ಕಾರದ ಹಂತದಲ್ಲಿ ಸಚಿವ ಸಂಪುಟಕ್ಕೆ ಬಂದು ಚರ್ಚೆ ಆಗುತ್ತೆ ಎಂದರು.
ಬಿಹಾರದಲ್ಲಿ ವರದಿ ಬಿಡುಗಡೆಯಾಗಿದೆ. ಏನಾಯ್ತು, ಆಕಾಶ ಬಿದ್ದು ಹೊಯ್ತಾ. ಇಲ್ಲಿ ಇನ್ನು ವರದಿ ಬಂದಿಲ್ಲ, ಸುಮ್ಮನೆ ಊಹಾಪೋಹಗಳ ಮೇಲೆ ಪ್ರಶ್ನೆ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ವಿ.ಸೋಮಣ್ಣ ಕರೆ ಮಾಡಿದ ವಿಚಾರವಾಗಿ ಮಾತನಾಡಿ, ಸೋಮಣ್ಣ ನಮ್ಮ ಹಳೇ ಸ್ನೇಹಿತ. ಕಾಲ್ ಮಾಡೋದು ಏನಾಯ್ತೆ, ನಾನೇ ಕಾಲ್ ಮಾಡಿ ಮಾತನಾಡ್ತೇನೆ ಎಂದರು.
ವಿ ಸೋಮಣ್ಣ ಅವರನ್ನ ಕಾಂಗ್ರೆಸ್ ಗೆ ಆಹ್ವಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವ್ರೇ ಬಿಜೆಪಿಗೆ ನನ್ನ ಇನ್ವೈಟ್ ಮಾಡಿದ್ರು ಎಂದರು.