ಬೆಳಗಾವಿ: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಚರ್ಚೆಯಾಗುತ್ತಿದ್ದು ಸಿದ್ಧರಾಮಯ್ಯನವರೇ 5 ವರ್ಷ ಸಿಎಂ ಆಗಿ ಅವಧಿ ಪೂರೈಸಲಿದ್ದಾರೆ ಎಂದು ಕೆಲ ಸಚಿವರು ಹೇಳಿಕೆ ನೀಡುತ್ತಿದ್ದರೆ ಇತ್ತ ಬಿಜೆಪಿ ನಾಯಕರು ನವೆಂಬರ್ ನಲ್ಲೇ ಸಿದ್ದರಾಮಯ್ಯ ಸಿಎಂ ಕುರ್ಚಿಯಿಂದ ಕೆಳಗಿಳಿಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಅಲ್ಲದೇ ಇತ್ತೀಚೆಗೆ ಮಾತನಾಡಿದ್ದ ಸಚಿವ ಸತೀಶ್ ಜಾರಕಿಹೊಳಿ ಮುಂದಿನ ಚುನಾವಣೆ ಗೆಲ್ಲಲು ಸಿದ್ದರಾಮಯ್ಯ ರಾಜಕೀಯದಲ್ಲಿ ಇರಬೇಕು ಎಂದಿದ್ದರು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಮಾತನಾಡಿದ ಸಚಿವ ಶಿವಾನಂದ್ ಪಾಟೀಲ್ ಮುಂದಿನ ಅವಧಿಗೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿ ಮುಂದುವರೆದರೆ ತಪ್ಪೇನು..? ಸಿ.ಎಂ ವಿಚಾರದಲ್ಲಿ ನಾನು ಭವಿಷ್ಯ ನುಡಿಯುವಂಥದ್ದಲ್ಲ, ಸಿ.ಎಂ ಸ್ಥಾನದಲ್ಲಿ ಯಾರನ್ನು ಮುಂದುವರಿಸಬೇಕು ಮತ್ತು ಬದಲಿಸಬೇಕು ಎಂಬುದನ್ನು ಸಿಎಲ್‌ಪಿ ಹಾಗೂ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಸ್ಪಷ್ಟನೆ ನೀಡಿದರು.
ಅವಶ್ಯಕತೆ ಇಲ್ಲದಿರೋದನ್ನ ಚರ್ಚಿಸಿದ್ರೆ ಉಪಯೋಗವಿಲ್ಲ, ಮುಂದಿನ ಅವಧಿಗೆ ಸಿಎಂ ಅವಶ್ಯಕತೆ ಇದೆ ಎಂಬ ಹೇಳಿಕೆ ಇಲ್ಲ ಅಂತಾ ಯಾರು ಹೇಳಿದ್ದಾರೆ. ಈಗ ಅವರೇ ಇದ್ದಾರಲ್ಲವೇ. ಮುಂದೆಯೂ ಸಿಎಂ ಸಿದ್ದರಾಮಯ್ಯ ಅವರೇ ಇರಬಹುದು ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಸಿಎಂ ಬದಲಾವಣೆ ವಿಚಾರದಲ್ಲಿ ಮಾಧ್ಯಮದವರು ನೀವೇ ಪದೇಪದೆ ಪ್ರಶ್ನೆ ಕೇಳುತ್ತೀರಿ. ಹೀಗಾಗಿ ಅದು ಚರ್ಚೆಯಾಗುತ್ತಿದೆ. ಅವಶ್ಯಕತೆ ಇಲ್ಲದಿರುವುದನ್ನು ಕೇಳಿದರೆ ಏನೂ ಉಪಯೋಗವಿಲ್ಲ ಎಂದರು.