ವಿಜಯಪುರ: ಎಚ್.ಡಿ.ದೇವೇಗೌಡ ಅವರು ಕರ್ನಾಟಕ ಮುಖ್ಯಮಂತ್ರಿ ಇದ್ದಾಗ, ತಾವು ಸಹ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವವಿದೆ. ಹೀಗಾಗಿ ಮುಂದಿನ ಲೋಕಸಭೆ ಚುನಾವಣೆಗೆ ಜೆಡಿಎಸ್ – ಬಿಜೆಪಿ ಮೈತ್ರಿಯಾದರೆ ತಪ್ಪೇನು ಇಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ನೂತನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಪೂರ್ವ ಮೈತ್ರಿಯನ್ನು ನಮ್ಮ ನಾಯಕರು ಹೈಕಮಾಂಡ್ ಮಟ್ಟದಲ್ಲಿ ಮಾಡಿಕೊಂಡರೆ ತಮ್ಮದು ಯಾವುದೇ ಅಭ್ಯಂತರವಿಲ್ಲ. ಜೆಡಿಎಸ್ ಜತೆ ಯಾರೇ ಮೈತ್ರಿಗೆ ಬಂದರೂ ಸಹ ಸ್ವಾಗತಿಸುತ್ತೇವೆ. ಬೇಕಾದರೆ ನೀವು ಬನ್ನಿ ಬೇಡ ಅನ್ನುವುದಿಲ್ಲ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸನಾತನ ಹಿಂದೂ ಧರ್ಮದ ಬಗ್ಗೆ ತಮಿಳುನಾಡು ಸಚಿವ ಹಾಗೂ ಸಿಎಂ ಸ್ಟಾಲಿನ್ ಪುತ್ರ ಉದಯನಿಧಿ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿದ ಅವರು, ಸಣ್ಣ ಸಣ್ಣ ಹುಡುಗರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಉದಯನಿಧಿ ಇಂದು ನಿನ್ನೆ ಮಂತ್ರಿಯಾಗಿದ್ದಾರೆ. ನಾವು ಇಂದಿರಾಗಾಂಧಿ, ರಾಜೀವಗಾಂಧಿ, ಸಂಜಯಗಾಂಧಿ ಕಾಲದಲ್ಲಿ ನೋಡಿದ್ದೇನೆ. ಧರ್ಮದ ವಿಷಯದಲ್ಲಿ ಯಾರು ಕೈ ಹಾಕುತ್ತಾರೆ ಅವರು ಮತ್ತು ಅವರ ಪಕ್ಷವೂ ಉಳಿಯಲ್ಲ. ಧರ್ಮದ ವಿಷಯದಲ್ಲಿ ಯಾರೂ ಕೂಡ ಯಾವ ಪಕ್ಷದವರು ಸಹ ಭಾಗಿಯಾಗಬಾರದು. ಧರ್ಮದಲ್ಲಿ ಕೈ ಹಾಕಿದವರು ಈ ದೇಶದಲ್ಲಿ ಉಳಿದಿಲ್ಲ ಎಂದು ಪುನರುಚ್ಚರಿಸಿದರು.