ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ನಾಡು, ನುಡಿ ಮತ್ತು ಭಾಷೆಯ ವಿಚಾರ ಬಂದಾಗ ಸರ್ವರೂ ಒಂದಾಗಿ ಹೆಗಲುಕೊಟ್ಟು
ಕೆಲಸ ಮಾಡಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು. ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಕಸಾಪ ವತಿಯಿಂದ ನಡೆದ ಗಣ್ಯರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬ ಕನ್ನಡಿಗನೂ ಭಾಷಾ ಪ್ರೇಮವನ್ನು ಬೆಳೆಸಿಕೊಂಡು ಅದನ್ನು ಉಳಿಸಿ ಬೆಳೆಸಬೇಕು ಎಂದು
ತಿಳಿಸಿದರು.
ಪಟ್ಟಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿನ ಸಾಹಿತ್ಯ ಭವನ ನಿರ್ಮಾಣ ಮಾಡಲು ಕ್ರಮ
ಕೈಗೊಳ್ಳುವ ಭರವಸೆ ನೀಡಿದ ಶಾಸಕರು ಇದಕ್ಕೆ ಅಗತ್ಯವಿರುವ ನಿವೇಶನವನ್ನು ಗುರುತು ಮಾಡುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಲಿದ್ದು ಕಸಾಪ ಪದಾಧಿಕಾರಿಗಳು ಈ ವಿಚಾರದಲ್ಲಿ ನನ್ನೊಂದಿಗೆ ಸಹಕಾರ ನೀಡಬೇಕು ಎಂದರು.
ಸಾಹಿತ್ಯ ಕ್ಷೇತ್ರಕ್ಕೆ ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಸಿಪಿಕೆ, ಎಚ್ಚೆಸ್ಕೆ ಸೇರಿದಂತೆ ಹತ್ತಾರು ಮಂದಿ ದಿಗ್ಗಜ ಸಾಹಿತಿಗಳು ತಮ್ಮದೇ ಆದ ಕೊಡುಗೆ ನೀಡಿ ಭಾಷೆಯ ಬೆಳೆವಣಿಗೆಗೆ ಸಾಹಿತ್ಯ ಕೃಷಿ ಮೂಲಕ ಉತ್ತಮ ಕೆಲಸ ಮಾಡಿದ್ದು ಅವರ ಹೆಸರುಗಳನ್ನು ಹುಟ್ಟೂರಿನ ಮುಖ್ಯ ವೃತ್ತಗಳಿಗೆ ನಾಮಕರಣ ಮಾಡಲು ಕ್ರಮ
ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಮಂಡ್ಯ ಜಿಲ್ಲಾ ಕೇಂದ್ರದಲ್ಲಿ ಜನವರಿ ತಿಂಗಳಿನಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಮ್ಮ ವಿಧಾನ ಸಭಾ ಕ್ಷೇತ್ರದಿಂದ ಹೆಚ್ಚು ಮಂದಿ ಭಾಗವಹಿಸಿ ಕನ್ನಡ ತೇರನ್ನು ಎಳೆಯಲು ಕೈ ಜೋಡಿಸಬೇಕು ಎಂದು ಮನವಿ ಮಾಡಿದ ಅವರು ಅಲ್ಲಿಗೆ ತೆರಳಲು ಅಗತ್ಯ ವ್ಯವಸ್ಥೆ ಮತ್ತು ಇತರ ಅನುಕೂಲವನ್ನು ಮಾಡಿಕೊಡುವುದಾಗಿ ನುಡಿದರು.
ತಾಲೂಕು ಕಸಾಪ ಅಧ್ಯಕ್ಷ ಡಿಂಡಿಮಶoಕರ್ ಮಾತನಾಡಿ ಮುಂದಿನ ದಿನಗಳಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನ ನಡೆಸುವುದರ ಜತೆಗೆ ಕನ್ನಡದ ಕಂಪನ್ನು ಹಳ್ಳಿ ಹಳ್ಳಿಗೂ ಪಸರಿಸುವ ಉದ್ದೇಶದಿಂದ ಹೋಬಳಿ ಮಟ್ಟದಲ್ಲಿಯೂ ಸಮ್ಮೇಳನ ನಡೆಸಲು ಉದ್ದೇಶಿಸಿದ್ದು ಇದಕ್ಕೆ ಶಾಸಕರು ಮತ್ತು ಕನ್ನಡ ಪ್ರೇಮಿಗಳು ಅಗತ್ಯ ಸಹಕಾರ ಮತ್ತು ಮಾರ್ಗದರ್ಶನ ನೀಡಬೇಕು ಎಂದು ಕೋರಿದರು.
ಪಟ್ಟಣದ ವಿವಿಧ ವೃತ್ತಗಳಿಗೆ ಈ ಹಿಂದೆ ಸಮಾಜ ಸೇವಕರೂ ಮತ್ತು ದಿಗ್ಗಜರ ಹೆಸರುಗಳನ್ನು ಪ್ರಮುಖ ವೃತ್ತಗಳಿಗೆ ನಾಮಕರಣ ಮಾಡಲಾಗಿತ್ತು ಆದರೆ ಈಗ ಆ ಫಲಕಗಳು ಕಾಣೆಯಾಗಿದ್ದು ಅವುಗಳನ್ನು ಪುನರ್
ಪ್ರತಿಷ್ಠಾಪನೆ ಮಾಡಿಸಬೇಕೆಂದು ಶಾಸಕರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ನಿಟಕ ಪೂರ್ವ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ತಾಲೂಕು ಗೌರವಾಧ್ಯಕ್ಷ
ಡಾ.ಡಿ.ನಟರಾಜ್ ಮಾತನಾಡಿದರು. ಕಸಾಪ ವತಿಯಿಂದ ಶಾಸಕ ಡಿ.ರವಿಶಂಕರ್, ನಗರ ಯೋಜನಾ
ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಭಾಸ್ಕರ, ಜಿಲ್ಲಾ ಪ್ರಶಸ್ತಿ ಪುರಸ್ಕೃತೆ ಭಾರತಿಕಶ್ಯಪ್, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಮಕೃಷ್ಣ, ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ ಪುರಸ್ಕೃತ ಭೇರ್ಯರಾಮ್‌ಕುಮಾರ್ ಅವರುಗಳನ್ನು ಅಭಿನಂದಿಸಲಾಯಿತು.
ಸಾಹಿತಿ ಹೆಗ್ಗಂದೂರು ಪ್ರಭಾಕರ್, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಜಿ.ಪ್ರಕಾಶ್, ನಗರ ಘಟಕದ ಅಧ್ಯಕ್ಷ ಸಿ.ವಿ.ಮೋಹನ್ ಕುಮಾರ್, ಪದಾಧಿಕಾರಿಗಳಾದ ಭಾಸ್ಕರ್.ಕೆ.ಎಲ್, ಬಿಎಸ್‌ಎನ್‌ಎಲ್ ಕೃಷ್ಣ, ಗೋಪಾಲ್,
ಬಿ.ಎಲ್.ಮಹದೇವ್, ಕೆ.ಎಲ್.ಕೃಷ್ಣಯ್ಯ ಮತ್ತಿತರರು ಹಾಜರಿದ್ದರು.