Tuesday, January 6, 2026
Google search engine

Homeರಾಜ್ಯನಮ್ಮನ್ನು ನಾವು ತಿಳಿದು ಕೊಂಡಾಗ ಸಮರ್ಥ ಕಾರ್ಯ ನಿರ್ವಹಣೆ ಸಾಧ್ಯ..!

ನಮ್ಮನ್ನು ನಾವು ತಿಳಿದು ಕೊಂಡಾಗ ಸಮರ್ಥ ಕಾರ್ಯ ನಿರ್ವಹಣೆ ಸಾಧ್ಯ..!

ಬೆಂಗಳೂರು: ನಮ್ಮನ್ನು ನಾವು ತಿಳಿದುಕೊಂಡಾಗ ಹಾಗೂ ನಮ್ಮೊಳಗೆ ನಾವೇ ಮಾತಾಡಿಕೊಂಡಾಗ ಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಈ ಕುರಿತು ಗಿರಿನಗರದಲ್ಲಿರುವ ಶ್ರೀಮಠದ ಶಾಖಾ ಮಠದಲ್ಲಿ ನಡೆದ ಶಾಸನತಂತ್ರ ಅಧಿವೇಶನದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು ಈ ಹಿಂದೆ ಮಠದ ವ್ಯವಸ್ಥೆಯಲ್ಲಿ ವ್ಯಕ್ತಿಗಳಿಗೆ ಜವಾಬ್ದಾರಿ ಯನ್ನು ನೀಡಲಾಗುತ್ತಿತ್ತು. ನಮ್ಮ ಕಾಲದಲ್ಲಿ ಅದಕ್ಕೆ ವ್ಯವಸ್ಥೆಯ ರೂಪವನ್ನು ನೀಡಿ, ಸಮಷ್ಟಿಗೆ ಅಥವಾ ಸಮಿತಿಗೆ ಜವಾಬ್ದಾರಿಯನ್ನು ಹಂಚಲಾಗಿದೆ. ಯಾರೋ ಕೆಲವೇ ಕೆಲವು ಜನರಿಂದ ಮಠ ನಡೆಯುವಂತೆ ಆಗಬಾರದು. ಸಮಾಜ ಮಠವನ್ನು ನಡೆಸಬೇಕು ಎಂಬುದು ನಮ್ಮ ಅಭಿಲಾಷೆ ಎಂದರು.

ಈ ಹಿನ್ನೆಲೆಯಲ್ಲಿ ಬಹುತೇಕ ಸಮಾಜದ ಎಲ್ಲರಿಗೂ ಮಠದ ವಿವಿಧ ಜವಾಬ್ದಾರಿಗಳನ್ನು ಹಂಚಲಾಗಿದ್ದು, ಮಠದಲ್ಲಿ ಪದಾಧಿಕಾರಿಗಳು ಎಂಬ ಜವಾಬ್ದಾರಿಯನ್ನು ನೀಡಿದರೂ ಇದು ಅಧಿಕಾರದ ಗದ್ದುಗೆಯಲ್ಲ. ಅಲ್ಲಿ ಕರ್ತವ್ಯದ ಹೊಣೆಗಾರಿಕೆ ಮಾತ್ರವಿದೆ. ಇದನ್ನು ಕಾರ್ಯಕರ್ತರು ಮನಗಾಣಬೇಕು. ಶ್ರೀಮಠದಲ್ಲಿ ಗುರು ಶಿಷ್ಯರ ಮಧ್ಯೆ ತಂದೆ ಹಾಗೂ ಮಕ್ಕಳ ಸಂಬಂಧವಿದ್ದು, ಇಲ್ಲಿ ಕಾರ್ಯಕರ್ತರು ಅವರಿಗೆ ಸಿಕ್ಕಿದ ಪ್ರೀತಿಯನ್ನು ಇತರ ಕಾರ್ಯಕರ್ತರಿಗೆ ಹಂಚಿದಾಗ ಸಂಘಟನೆ ಬೆಳೆಯಲು ಸಾಧ್ಯ ಎಂದರು.

ಬಳಿಕ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಕಟ್ಟ ಕೊನೆಯ ಕಾರ್ಯಕರ್ತನವರೆಗೂ ಗರಿಷ್ಠವಾದ ಬಾಂಧವ್ಯವನ್ನು ಇಟ್ಟುಕೊಂಡಾಗ ಸಮರ್ಥ ಸಂಘಟನೆ ಸಾಧ್ಯ. ರಾಘವೇಶ್ವರ ಶ್ರೀಗಳ ಪ್ರೀತಿಯ ಭಾವ ರಾಮಚಂದ್ರಾಪುರ ಮಠದ ಸಂಘಟನೆಯನ್ನು ಘಟ್ಟಿಗೊಳಿಸಿದೆ ಹಾಗೂ ರಾಮಚಂದ್ರಾಪುರ ಮಠದ ಸಂಘಟನೆಯನ್ನು ಮಾದರಿಯಾಗಿಸಿದೆ ಎಂದು ತಿಳಿಸಿದರು.

ಇನ್ನೂ ಸೇವೆಯ ಹಿಂದಿರುವ ತತ್ತ್ವಶಾಸ್ತ್ರ ಅನುಪಮವಾಗಿದ್ದು, ಅದು ಅರ್ಥವಾದಾಗ ಸೇವೆಯಿಂದಲೇ ಮುಕ್ತಿ ಸಾಧ್ಯ. ಇದೇ ಭಗವಂತ ಹೇಳಿದ ಕರ್ಮಯೋಗವಾಗಿದೆ. ಸೇವೆ ಹಾಗೂ ತ್ಯಾಗಗಳಿಂದ ಹೊಸ ಭಾರತವನ್ನು ಕಟ್ಟಲು ಸಾಧ್ಯ. ವ್ಯಕ್ತಿಯೊಬ್ಬ ಸಂಘಟನೆಯ ಭಾಗವಾಗದೇ ಇದ್ದರೆ ಅದು ಆ ವ್ಯಕ್ತಿಗೆ ನಷ್ಟವಾಗುತ್ತದೆ ವಿನಃ ಸಂಘಟನೆಗೆ ನಷ್ಟವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ನಂತರ ಹಿರಿಯ ವಿದ್ವಾಂಸ ಡಾ.ಎಂ.ಎಸ್ ಸನತ್ ಕುಮಾರ್ ಸೋಮಯಾಜಿ ಮಾತನಾಡಿ, ಕಾರ್ಯಕರ್ತರಾಗಿ ಸೇವೆ ಮಾಡುವಾಗ ನಾನೇನು ಮಾಡಿದೆ ಎಂಬುದಷ್ಟೇ ಮುಖ್ಯವಾಗಬೇಕು ಹೊರತು, ನನಗೇನು ಸಿಕ್ಕಿತು ಎಂಬ ಪ್ರಶ್ನೆ ಬರಬಾರದು. ಎನಗಿಂತ ಕಿರಿಯರಿಲ್ಲ ಎಂಬ ಭಾವ ಪ್ರತಿಯೊಬ್ಬ ಕಾರ್ಯಕರ್ತನಲ್ಲಿ ಇದ್ದರೆ ಬಲಿಷ್ಠ ಸಂಘಟನೆ ಸಾಧ್ಯ ಎಂದರು. ವಿದ್ವಾನ್ ಜಗದೀಶ ಶರ್ಮಾ ಸಂಪ ಮಾತನಾಡಿ, ಶಂಕರ ಸಿದ್ಧಾಂತ ಇರುವುದು ಮನಸ್ಸಿಗಾಗಿ. ಹೃದಯದ ಶುದ್ಧಿಗಾಗಿ. ಶಂಕರ ಸಿದ್ಧಾಂತ ಹೃದಯದ ವಿಸ್ತಾರವನ್ನು ಬೋಧಿಸುತ್ತದೆ. ಆ ತತ್ವವನ್ನು ಅಳವಡಿಸಿಕೊಂಡಾಗ ಮನೆಗೆ ಹಾಗೂ ಜಗತ್ತಿಗೆ ಶ್ರೇಷ್ಠ ಎಂದು ಅಭಿಪ್ರಾಯಪಟ್ಟರು.

ಈ ವೇಳೆ ಶ್ರೀಮಠದ ಧಾರ್ಮಿಕ ಮಾಸಪತ್ರಿಕೆ ಧರ್ಮಭಾರತಿಯ ಅಂತರ್ಜಾಲ ಆವೃತ್ತಿಯನ್ನು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಹಾಗೂ ಹಿರಿಯ ನ್ಯಾಯವಾದಿ ಅರುಣ ಶ್ಯಾಮ್ ಲೋಕಾರ್ಪಣೆ ಮಾಡಿದರು. ಈ ವೇಳೆ ಶ್ರೀಮಠದ ಸಮ್ಮುಖ ಸರ್ವಾಧಿಕಾರಿ ತಿಮ್ಮಪ್ಪಯ್ಯ ಮಡಿ ಯಾಳ್ ಧ್ವಜಾರೋಹಣ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

RELATED ARTICLES
- Advertisment -
Google search engine

Most Popular