ಚನ್ನಪಟ್ಟಣ: ನಾವು ಮೂಲತಃ ಬೆಂಗಳೂರಿನವರು. ಬೆಂಗಳೂರು ಎಂಬುದು ನಮ್ಮ ಗುರುತು ಹಾಗೂ ನಮ್ಮ ಸ್ವಾಭಿಮಾನ. ಇದನ್ನು ನಾವು ಕಳೆದುಕೊಳ್ಳಬಾರದು. ಹೀಗಾಗಿ ಬಿಜೆಪಿ ಮತ್ತು ಜೆಡಿಎಸ್ ಏನಾದರೂ ಟೀಕೆ ಮಾಡಲಿ ಈ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡಿಯೇ ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಚನ್ನಪಟ್ಟಣದಲ್ಲಿ ನಡೆದ ಸರ್ಕಾರಿ ನೌಕರರ ಸಂಘದ ಸಮ್ಮೇಳನದಲ್ಲಿ ಮಾತನಾಡಿದ ಶಿವಕುಮಾರ್ ಜಿಲ್ಲೆಯ ಹೆಸರು ಮಾತ್ರ ಬದಲಾಗುತ್ತದೆ ಹೊರತು ರಾಮನಗರದ ಹೆಸರು, ಆಡಳಿತ ಕೇಂದ್ರ ಹಾಗೆಯೇ ಉಳಿಯಲಿದೆ. ಚನ್ನಪಟ್ಟಣ, ರಾಮನಗರ, ಕನಕಪುರ, ಮಾಗಡಿ, ಹಾರೋಹಳ್ಳಿ ಸೇರಿಸಿ ಬೆಂಗಳೂರು ದಕ್ಷಿಣ ಮಾಡಲಾಗುತ್ತದೆ. ನಾನು ಜಿಲ್ಲಾ ಪರಿಷತ್ ಸದಸ್ಯನಾಗಿದ್ದಾಗ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪರಿಷತ್ ಎಂದು ಇತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿತ್ತು. ಆಡಳಿತಾತ್ಮಕವಾಗಿ ಪ್ರತ್ಯೇಕ ಜಿಲ್ಲೆ ಮಾಡುವಾಗ ಬೆಂಗಳೂರು ಹೆಸರನ್ನು ಕಳೆದುಕೊಳ್ಳುವುದು ಬೇಡ ಎಂದು ಸಲಹೆ ನೀಡಿದ್ದೆ.
೨೦೦೩ರಲ್ಲಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಬೆಂಗಳೂರಿಗೆ ಬಂದು, ಇಷ್ಟು ದಿನಗಳ ಕಾಲ ವಿಶ್ವದ ನಾಯಕರು ಮೊದಲು ದೆಹಲಿಗೆ ಬಂದು ನಂತರ ದೇಶದ ಇತರೆ ನಗರಗಳಿಗೆ ಹೋಗುತ್ತಿದ್ದರು. ಈಗ ಮೊದಲು ಬೆಂಗಳೂರಿಗೆ ಬಂದು ನಂತರ ದೇಶದ ಬೇರೆ ನಗರಗಳಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದರು.
ಬಿಜೆಪಿ ಹಾಗೂ ಜೆಡಿಎಸ್ ನವರು ಏನಾದರೂ ಟ್ವೀಟ್ ಮಾಡಲಿ, ಟೀಕೆ ಮಾಡಲಿ, ನಮ್ಮ ಸ್ವಾಭಿಮಾನವನ್ನು ನಾವು ಬಿಡುವ ಪ್ರಶ್ನೆಯೇ ಇಲ್ಲ. ಜನ ನಮ್ಮ ನಿರ್ಧಾರದಿಂದ ಸಂತೋಷವಾಗಿದ್ದಾರೆ.
ನಾನು, ನಮ್ಮ ನಾಯಕರು ಈ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕಾರಣ ಮಾಡಲು ಮುಂದಾದರೆ ರಿಯಲ್ ಎಸ್ಟೇಟ್ ಗಾಗಿ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಕೆಲವರು ಟೀಕೆ ಮಾಡುತ್ತಿದ್ದಾರೆ. ನಾನು ಇಲ್ಲಿ ಬಂದು ರಿಯಲ್ ಎಸ್ಟೇಟ್ ಮಾಡಬೇಕಾಗಿಲ್ಲ. ನನ್ನ ಕ್ಷೇತ್ರದಲ್ಲಿ ಅನೇಕ ಆಸ್ತಿಯನ್ನು ಶಾಲೆಗಳಿಗೆ ದಾನ ಮಾಡಿದ್ದೇನೆ. ನಾನು ಬಡವ ಎಂದು ಹೇಳುವುದಿಲ್ಲ. ಇದು ನನ್ನ ನೆಲ. ನನ್ನನ್ನು ಬೆಳೆಸಿದ ನೆಲ. ಇದನ್ನು ಅಭಿವೃದ್ಧಿ ಮಾಡಬೇಕಾಗಿರುವುದು ನನ್ನ ಜವಾಬ್ದಾರಿ ಎಂದು ಹೇಳಿದರು.