ಬಳ್ಳಾರಿ : ಯಾರ ಪಾಲಾಗಲಿದೆ ಸಾವಿರಾರು ಕೋಟಿ ಖಜಾನೆಯ ಗಣಿ ಜಿಲ್ಲೆ ಬಳ್ಳಾರಿ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.
ಬಯಸಿದ ಖಾತೆ ಸಿಗದ ಸಚಿವರಿಗೆ ಬಯಸಿದ ಜಿಲ್ಲೆ ಉಸ್ತುವಾರಿಯಾಗಿ ಅವಕಾಶ ಸಿಗುತ್ತಾ ಎಂಬ ಕುತೂಹಲ ಎಲ್ಲರ ಮನಸ್ಸಲ್ಲಿ ಮನೆ ಮಾಡಿದೆ.
ಬಳ್ಳಾರಿ ಜಿಲ್ಲೆಯ ಮೇಲೆ ಮೂವರು ಸಚಿವರ ಕಣ್ಣು ಬಿದ್ದಿದೆ. ಬಳ್ಳಾರಿಯಂತ ಜಿಲ್ಲೆಯ ಉಸ್ತುವಾರಿಯಾಗಲು ಈಗಾಗಲೇ ಪೈಪೋಟಿ ಶುರುವಾಗಿದೆ.
ಬಳ್ಳಾರಿ ಉಸ್ತುವಾರಿಗಾಗಿ ಸಚಿವ ಸಂತೋಷ್ ಲಾಡ್ ಹಾಗೂ ಸಚಿವ ನಾಗೇಂದ್ರ ಪೈಪೋಟಿ ನಡೆಸುತ್ತಿದ್ದು, ಈ ನಡುವೆ ತನ್ನ ಆಪ್ತರಿಗೆ ಉಸ್ತುವಾರಿ ಸ್ಥಾನ ಕೊಡಿಸಲು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಲಾಭಿ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಗಣಿ ಜಿಲ್ಲೆಯಲ್ಲಿ ಜಿಲ್ಲಾ ಖನಿಜ ನಿಧಿ ಹಾಗೂ ಕೆಎಂಇಆರ್ ಸಿ ಯ 13 ಸಾವಿರ ಕೋಟಿಗೂ ಹೆಚ್ಚು ಹಣವಿದೆ. ಸರ್ಕಾರ ಅನುದಾನ ಕಡಿಮೆ ಮಾಡಿದರೂ ಕೂಡ ಈ ಹಣದಿಂದ ಅಭಿವೃದ್ಧಿ ಮಾಡಬಹುದು ಎನ್ನುವ ವಿಶ್ವಾಸ ಜನಪ್ರತಿನಿಧಿಗಳಲ್ಲಿದೆ.
ಮೈತ್ರಿ ಸರ್ಕಾರವಿದ್ದಾಗ ತೀವ್ರ ಲಾಭಿ ಮಾಡಿ ಡಿ ಕೆ ಶಿವಕುಮಾರ್ ಬಳ್ಳಾರಿ ಉಸ್ತುವಾರಿಯಾಗಿದ್ದರು. ಅದಾದ ಬಳಿಕ ಬಳ್ಳಾರಿ ಉಸ್ತುವಾರಿಗಾಗಿ ಹಠಕ್ಕೆ ಬಿದ್ದು, ಶ್ರೀರಾಮುಲು ಆ ಸ್ಥಾನ ಪಡೆದಿದ್ದರು.
ಈಗ ಸಚಿವ ನಾಗೇಂದ್ರ ಬಳ್ಳಾರಿ ಗ್ರಾಮೀಣದಿಂದ ಗೆದ್ದಿದ್ದಾರೆ, ಅವರಿಗೆ ಮಣೆ ಹಾಕುವ ಸಾಧ್ಯತೆ ಇದೆ. ಆದರೆ ಸಂಡೂರು ಮೂಲದ ಸಚಿವ ಸಂತೋಷ್ ಲಾಡ್ ಗೂ ಬಳ್ಳಾರಿ ಮೇಲೆ ಕಣ್ಣಿದ್ದೂ, ಬಳ್ಳಾರಿ ಗಣಿ ಯಾರಿಗೆ ಸಿಗಲಿದೆ ಎಂಬ ಕುತೂಹಲ ಜನರಲ್ಲಿ ಮನೆ ಮಾಡಿದೆ.