ಬೆಳಗಾವಿ: ರಾಜ್ಯ ವಿಧಾನಸಭೆಯಲ್ಲಿ ದ್ವೇಷ ಭಾಷಣ ಮಸೂದೆಯನ್ನು ಮಂಡಿಸುವುದಕ್ಕೆ ಭಾರತೀಯ ಜನತಾ ಪಕ್ಷ ವಿರೋಧ ಮಾಡುತ್ತಿರುವುದು ಏಕೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಂಗಳವಾರ ಪ್ರಶ್ನಿಸಿದ್ದು, ಸುದ್ದಿಸಂಸ್ಥೆ ಎಎನ್ಐ ಜೊತೆಗೆ ಮಾತನಾಡಿದ ಅವರು, ದ್ವೇಷ ಭಾಷಣ ಮಸೂದೆ ಕುರಿತು ವಿಧಾನಸಭೆಯಲ್ಲಿ ಚರ್ಚಿಸಲಾಗುವುದು. ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳು ಏಕೆ ಭಯಭೀತರಾಗುತ್ತಿವೆ? ಅದಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
ಅಲ್ಲದೇ ಸಚಿವ ಸಂತೋಷ್ ಲಾಡ್ ಕೂಡ ಎಲ್ಲದಕ್ಕೂ ಒಂದು ಕಾನೂನು ಇದೆ. ಆದ್ದರಿಂದ ದ್ವೇಷ ಭಾಷಣಕ್ಕೂ ಕಾನೂನು ಜಾರಿಯಾಗುತ್ತಿದೆ. ಅದರಲ್ಲಿ ತಪ್ಪೇನು? ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಇದೇ ರೀತಿಯ ಅಭಿಪ್ರಾಯಗಳನ್ನು ಪ್ರತಿಧ್ವನಿಸುತ್ತಾ ಸಚಿವ ಮಧು ಬಂಗಾರಪ್ಪ, ಸಾಮಾಜಿಕ ಮಾಧ್ಯಮವನ್ನು ಸರಿಯಾಗಿ ಬಳಸಬೇಕು. ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಮಾಹಿತಿಯನ್ನು ಹರಡುವುದು ಶಿಕ್ಷಾರ್ಹವಾಗಿರಬೇಕು ಎಂದು ಹೇಳಿದರು.
ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಮಸೂದೆ – 2025ಕ್ಕೆ ಡಿಸೆಂಬರ್ 4 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಈ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದ್ದು, ವಿರೋಧ ಪಕ್ಷಗಳು ಇದನ್ನು ವಿರೋಧಿಸಿವೆ.
ಧರ್ಮ, ಜನಾಂಗ, ಭಾಷೆ, ಜನ್ಮಸ್ಥಳ, ಜಾತಿ, ಲಿಂಗದ ಆಧಾರದಲ್ಲಿ ದ್ವೇಷದ ಭಾಷಣ ಮಾಡುವವರನ್ನು ನಿರ್ಬಂಧಿಸಲು ಮುಂದಾಗಿರುವ ರಾಜ್ಯ ಸರ್ಕಾರವು, ಕಾಯ್ದೆಯನ್ನು ಜಾರಿಗೆ ತರಲಿದೆ. ಹೀಗಾಗಿ, ದ್ವೇಷ ಭಾಷಣವನ್ನು ನಿಗ್ರಹಿಸಲು ರಾಜ್ಯ ಸರ್ಕಾರ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಮಸೂದೆಯನ್ನು ಅಧಿವೇಶನದಲ್ಲಿ ಮಂಡಿಸಲಾಗಿದೆ. ಕಳೆದ ಕೆಲವು ದಿನಗಳಿಂದ ರಾಜಕೀಯ ವಲಯದಲ್ಲಿ ಬಿಸಿ ಚರ್ಚೆಯಾಗುತ್ತಿರುವ ಮಸೂದೆ ಇದು ಎನ್ನಲಾಗಿದೆ.
ಇನ್ನೂ ಈ ಕಾಯ್ದೆಯ ಅನ್ವಯ ದ್ವೇಷಾಪರಾದ ಎಸಗಿದವರಿಗೆ ಒಂದು ವರ್ಷದಿಂದ ಏಳು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಇದೇ ಮುಂದುವರಿದರೆ, 2 ವರ್ಷದಿಂದ 10 ವರ್ಷದವರೆಗೆ ಜೈಲು ಶಿಕ್ಷೆ ನೀಡಲಾಗುತ್ತದೆ ಹಾಗೂ 50 ಸಾವಿರದಿಂದ ಒಂದು ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.



