ಬೆಂಗಳೂರು : ಇನ್ನೇನು ಸರ್ಕಾರದ ಬುಡವೇ ಅಲುಗಾಡಲಿದೆ ಎಂಬ ಹಂತಕ್ಕೆ ಬಂದಿದ್ದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಭಿನ್ನಮತ ಕೇವಲ ಒಂದೇ ಒಂದು ಬ್ರೇಕ್ ಫಾಸ್ಟ್‌ನಲ್ಲಿ ಶಮನವಾಗಿರುವಾಗ ಬಿಜೆಪಿಯಲ್ಲಿ ಇದು ಏಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ಉದ್ಭವಿಸಿದೆ.
ಮುಖ್ಯಮಂತ್ರಿ ಕುರ್ಚಿಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ನಾನಾ? ನೀನಾ? ಎಂಬ ಹಂತಕ್ಕೆ ಪರಿಸ್ಥಿತಿ ಕೈ ಮೀರಿತ್ತು. ಸಾಲದ್ದಕ್ಕೆ ಎರಡೂ ಕಡೆಯ ಶಾಸಕರು ದೆಹಲಿ ಪ್ರವಾಸವನ್ನೂ ಸಹ ನಡೆಸಿದ್ದರು.
ಭಾರೀ ಜನಾದೇಶ ಪಡೆದು ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಸರ್ಕಾರ ಇನ್ನೇನು ಅಸ್ಥಿರಗೊಳ್ಳುತ್ತದೆ ಎಂದೇ ಜನತೆ ಭಾವಿಸಿದ್ದರು. ಅಲ್ಲಿಯವರೆಗೂ ಕಾದು ನೋಡುವ ತಂತ್ರ ಅನುಸರಿಸಿದ್ದ ಹೈಕಮಾಂಡ್ ನಾಯಕರು ಕೊನೆಗೂ ಮಧ್ಯಪ್ರವೇಶ ಮಾಡಿ ನೀವಿಬ್ಬರೂ ಒಟ್ಟಾಗಿ ಕುಳಿತು ಚರ್ಚಿಸಿ ದೆಹಲಿಗೆ ಬನ್ನಿ ಎಂದು ಸೂಚಿಸಿದರು.
ಇದಾದ ನಂತರ ನಡೆದಿದ್ದೆಲ್ಲವೂ ಪವಾಡವೇ ಸರಿ. ಹಾವು-ಮುಂಗೂಸಿಯಂತಿದ್ದ ಸಿಎಂ-ಡಿಸಿಎಂ ನಮಿಬ್ಬರ ನಡುವೆ ಏನೇನೂ ನಡೆದೇ ಇಲ್ಲ. ಮುಂದೆಯೂ ನಡೆಯುವುದಿಲ್ಲ. 2028ರ ಚುನಾವಣೆಯಲ್ಲಿ ನಾವು ಒಗ್ಗಟ್ಟಾಗಿರುತ್ತೇವೆ ಎಂದು ಸಾರಿ ಹೇಳಿದರು. ಈಗ ಡಿಸಿಎಂ ಕೂಡ ಸಿಎಂ ಅವರನ್ನು ತಮ್ಮ ನಿವಾಸಕ್ಕೆ ಬ್ರೇಕ್ ಫಾಸ್ಟ್‌ಗಾಗಿ ಆಹ್ವಾನಿಸಿ ಎಲ್ಲವೂ ಸುಖಾಂತ್ಯ ಕಾಣಲಿದೆ ಎಂಬ ಸಂದೇಶ ರವಾನಿಸುತ್ತಿದ್ದಾರೆ.
ಆದರೆ ಪ್ರತಿ ಪಕ್ಷ ಬಿಜೆಪಿಯ ಪರಿಸ್ಥಿತಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯಾವಾಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಅಂದಿನಿಂದ ಈವರೆಗೂ ಅದೇ ಬಿಕ್ಕಟ್ಟು, ಭಿನ್ನಮತ, ಗೊಂದಲ, ಗುಂಪುಗಾರಿಕೆ ಈ ಕ್ಷಣದವರೆಗೂ ನಿಂತಿಲ್ಲ . ಕೇಂದ್ರ ಮತ್ತು ಅನೇಕ ರಾಜ್ಯಗಳಲ್ಲಿ ಅಧಿಕಾರ ಹಿಡಿದು ಅತ್ಯಂತ ಬಲಿಷ್ಠ ಹೈಕಮಾಂಡ್ ನಮ್ಮದು ಅಂತಾ ಹೇಳಿಕೊಳ್ಳುವ ಬಿಜೆಪಿ ನಾಯಕರಿಗೆ ಕರ್ನಾಟಕದಲ್ಲಿನ ಬಿಕ್ಕಟ್ಟನ್ನು ಇತ್ಯರ್ಥ ಮಾಡದೆ ಸಮಯ ಬಂದಾಗ ನೋಡಿಕೊಳ್ಳೋಣ ಎಂಬ ನಿರ್ಧಾರಕ್ಕೆ ಬಂದಿರುವ ಹಾಗೆ ಕಾಣುತ್ತಿದ್ದಾರೆ.



