ಬೆಂಗಳೂರು: ರಾಜ್ಯದ ಬಿಜೆಪಿ ಸರ್ಕಾರವು ಜಾರಿಗೆ ತಂದಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ತೆಗೆದುಹಾಕುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದು, ವರ್ಷ ಕಳೆದರೂ ಅದನ್ನು ಅನುಷ್ಠಾನಕ್ಕೆ ತರದೇ ಇರುವುದು ಏಕೆ ಎಂಬುದನ್ನು ಉತ್ತರಿಸಿ’ ಎಂದು ರೈತ ಹೋರಾಟಗಾರರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಕೇಂದ್ರ, ರಾಜ್ಯ ಸರ್ಕಾರಗಳ ರೈತ-ಕಾರ್ಮಿಕ ವಿರೋಧಿ ನೀತಿಗಳ ಸಂಯುಕ್ತ ಹೋರಾಟ ಸಮನ್ವಯ ಸಮಿತಿಯ ಅಡಿಯಲ್ಲಿ ಈ ಪತ್ರ ಬರೆಯಲಾಗಿದೆ. ತಾನು ವಿರೋಧ ಪಕ್ಷದಲ್ಲಿದ್ದಾಗ ಕಾಂಗ್ರೆಸ್, ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿತ್ತು. ಅದರ ಅಧಾರದಲ್ಲಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಜಾರಿಗೆ ತಂದಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನೂ ಖಂಡಿಸಿತ್ತು. ನಾವು ಹೋರಾಡುವಾಗ ಸಿದ್ದರಾಮಯ್ಯ ಅವರು ನಮ್ಮ ಜತೆ ಬಂದು ಕುಳಿತಿದ್ದರು. ಆದರೆ ಅಧಿಕಾರಕ್ಕೆ ಬಂದ ನಂತರ, ತಮ್ಮ ಒಂದು ಮಾತನ್ನೂ ಅವರು ಈಡೇರಿಸಿಲ್ಲ’ ಎಂದಿದೆ.
ತಾನು ವಿರೋಧಿಸಿದ್ದ ಅದೇ ಕಾಯ್ದೆಗಳ ಅಡಿಯಲ್ಲಿ ಶಿಫಾರಸು ನೀಡಿ ಎಂದು ಕಾಂಗ್ರೆಸ್ ಸರ್ಕಾರವು ರಾಜ್ಯ ಕೃಷಿ ಬೆಲೆ ಆಯೋಗಕ್ಕೆ ಸೂಚನೆ ನೀಡಿದೆ. ರೈತರ ಆದಾಯ ಹೆಚ್ಚಿಸುವ, ಎಂಎಸ್‌ಪಿಗೆ ಕಾನೂನಿನ ಖಾತರಿ ನೀಡುವ ಒಂದು ಮಾತೂ ಸೂಚನೆಯಲ್ಲಿ ಇಲ್ಲ. ಸರ್ಕಾರದ ಈ ನಡೆಯಿಂದ ರಾಜ್ಯದ ರೈತರಿಗೆ ಅಪಾರ ನೋವಾಗಿದೆ. ಇದಕ್ಕೆಲ್ಲಾ ಸರ್ಕಾರ ಉತ್ತರ ಕೊಡಲೇಬೇಕು’ ಎಂದು ಒತ್ತಾಯಿಸಿದೆ.
ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ರೈತ ಸಂಘ ಮತ್ತು ಹಸಿರುಸೇನೆಯ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಪ್ರಾಂತ ರೈತ ಸಂಘದ ಟಿ. ಯಶವಂತ್, ರೈತ ಕೂಲಿ ಸಂಘದ ಎಚ್.ವಿ. ದಿವಾಕರ್, ಭಾರತೀಯ ಕೃಷಿಕ ಸಮಾಜದ ಸಿದಗೌಡ ಮೋದಗಿ, ಕರ್ನಾಟಕ ಜನಶಕ್ತಿಯ ನೂರ್ ಶ್ರೀಧರ್ ಸೇರಿ ಹತ್ತು ಮಂದಿ ಪತ್ರಕ್ಕೆ ಸಹಿ ಮಾಡಿದ್ದಾರೆ.