ನವದೆಹಲಿ: ಈ ಹಿಂದೆ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿತ್ತು. ಈಗ ಟೋಲ್ ದರ ಏಕೆ ಹೆಚ್ಚಳವಾಗಿದೆ? ಇದರ ಬಗ್ಗೆ ಬಿಜೆಪಿಯವರು ಯಾಕೆ ಪ್ರತಿಭಟನೆ ಮಾಡುತ್ತಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಬೆಲೆ ಏರಿಕೆ ಬಗ್ಗೆ ಬಿಜೆಪಿ ಧರಣಿ ಹಾಗೂ ರಸ್ತೆತಡೆ ಮಾಡುತ್ತಿರುವುದರ ಬಗ್ಗೆ ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಹಾಲಿನ ದರ ಹೆಚ್ಚಳ ಮಾಡಿರುವುದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ರೈತರ ಬದುಕನ್ನು ಸಹ ನಾವು ನೋಡಬೇಕಲ್ಲವೇ? ರೈತರ ಪಕ್ಷ ಎಂದು ಕೇವಲ ಹಸಿರು ಟವೆಲ್ ಹಾಕಿಕೊಂಡರೆ ಸಾಕೇ? .
ಅನೇಕ ರೈತರು ಹಸುಗಳನ್ನು ಮಾರಾಟ ಮಾಡಲು ಹೋಗುತ್ತಿದ್ದಾರೆ. ಈ ಹಿಂದೆ ಬೆಲೆ ಹೆಚ್ಚಳವಾದಾಗ ಅವರುಗಳೂ ಜನಪ್ರತಿನಿಧಿಗಳಾಗಿದ್ದರು ಅಲ್ಲವೇ ಎಂದು ಹೇಳಿದರು. ಪ್ರತಿಭಟನೆ ವಿಚಾರವಾಗಿ ಜೆಡಿಎಸ್ ಹಾಗೂ ಬಿಜೆಪಿ ಮಧ್ಯೆ ಒಡಕು ಮೂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಕ್ಷದ ವಿಚಾರ ನನಗೆ ಬೇಡ. ಅವರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇದರ ಬಗ್ಗೆ ಸುಮ್ಮನೆ ಚರ್ಚೆ ಏಕೆ? ಬಿಜೆಪಿಯವರ ಪ್ರತಿಭಟನೆಗೆ ನಾನು ಶುಭಕೋರುತ್ತೇನೆ. ಅವರು ಪಕ್ಷ ಉಳಿಸಿಕೊಳ್ಳಲು ರಾಜಕೀಯ ಮಾಡುತ್ತಿದ್ದಾರೆ, ಮಾಡಲಿ ಎಂದರು.