ಹೊಸದಿಲ್ಲಿ: ಗ್ರಾಮೀಣ ಭಾಗದ ಜನರ ಜೀವನಾಡಿಯಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ರದ್ದುಪಡಿಸಿ, ಅದರ ಬದಲಿಗೆ ಹೊಸ ‘ವಿಬಿ-ಜಿ ರಾಮ್ ಜಿ’ ಮಸೂದೆಯನ್ನು ತರಲು ಬಿಜೆಪಿ ಸರ್ಕಾರವು ಮುಂದಾಗಿದ್ದು, ಈ ಸಂಬಂಧ ಲೋಕಸಭೆಯಲ್ಲಿ ಮಂಡಿಸಲಾದ ಹೊಸ ಮಸೂದೆ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದು, ಕೇಂದ್ರ ಸರ್ಕಾರಕ್ಕೆ ಹೆಸರು ಬದಲಾಯಿಸುವ ಗೀಳು ಹಿಡಿದಿದೆ ಎಂದು ಕಿಡಿಕಾರಿದ್ದಾರೆ.
ಈ ವೇಳೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಾತನಾಡಿ, ಹಳೆಯ ಮನೆರೇಗಾ ಕಾಯ್ದೆಯನ್ನು ರದ್ದುಪಡಿಸಿ, ಅದರ ಬದಲಿಗೆ ‘ವಿಕಸಿತ ಭಾರತ- ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ ಮಸೂದೆ, 2025 ಅನ್ನು ಮಂಡಿಸಲು ಅನುಮತಿ ಕೋರಿದರು. ಇದೇ ಸಮಯದಲ್ಲಿ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಅವರು ನರೇಗಾ ಯೋಜನೆಯ ಮಹತ್ವದ ಬಗ್ಗೆ ಸಂಸತ್‌ನಲ್ಲಿ ಮಾತಾನಾಡಿದರು.
ಬಿಜೆಪಿ ಸಂಸದರು ಮಧ್ಯಪ್ರವೇಶಿಸಿ, ಮಹಾತ್ಮ ಗಾಂಧಿಯವರು ನಿಮ್ಮ ಕುಟುಂಬದವರಲ್ಲ ಎಂದು ಟೀಕಿಸಿದರು. ಇದಕ್ಕೆ ಖಡಕ್ ಆಗಿ ಪ್ರಿಯಾಂಕಾ ಗಾಂಧಿ ಉತ್ತರಿಸಿದ್ದು, ಮಹಾತ್ಮ ಗಾಂಧಿಯವರು ನನ್ನ ಕುಟುಂಬದವರಲ್ಲ ಹೌದು ಅದು ನಿಜ. ಆದರೆ, ಅವರು ನನಗೆ ಕುಟುಂಬದವರಿದ್ದಂತೆ. ಕೇವಲ ನನಗಷ್ಟೇ ಅಲ್ಲ, ಇಡೀ ದೇಶದ ಭಾವನೆಯೂ ಇದೆ ಆಗಿದೆ ಎಂದು ಪ್ರಿಯಾಂಕಾ ಗಾಂಧಿ ಸಂಸತ್‌ನಲ್ಲಿ ಉತ್ತರಿಸಿದ್ದಾರೆ.
ಇನ್ನು ಸಂಸತ್ ಆವರಣದಲ್ಲಿಯೂ ಸಹ ಮಹಾತ್ಮ ಗಾಂಧಿಯವರ ಭಾವಚಿತ್ರಗಳನ್ನು ಹಿಡಿದು ವಿಪಕ್ಷ ನಾಯಕರು ಪ್ರತಿಭಟನೆ ನಡೆಸಿದ್ದು, ಪ್ರಿಯಾಂಕಾ ಗಾಂಧಿ, ಕೆಸಿ ವೇಣುಗೋಪಾಲ್ ಸೇರಿದಂತೆ ಹಲವರು ಇದ್ದರು. ಈ ವೇಳೆ ಸರ್ಕಾರಕ್ಕೆ ಹೆಸರು ಬದಲಾಯಿಸುವ ಈ ಗೀಳು ಹೆಚ್ಚಾಗುತ್ತಿರುವುದಾದರೂ ಯಾಕೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ಹೆಸರು ಬದಲಾವಣೆಯು ಭಾರಿ ವೆಚ್ಚವನ್ನು ಒಳಗೊಂಡಿರುತ್ತದೆ. ಅನಗತ್ಯವಾಗಿ ಅವರು ಈ ಕ್ರಮ ಕೈಗೊಳ್ಳುತ್ತಿರೋದಾದರೂ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಮುಂದುವರೆದು, ನರೇಗಾ ಅಡಿಯಲ್ಲಿ ಬಡವರಿಗೆ 100 ದಿನಗಳ ಉದ್ಯೋಗದ ಹಕ್ಕನ್ನು ನೀಡಲಾಗಿತ್ತು. ಆದರೆ ಈ ಹೊಸ ಮಸೂದೆ ಆ ಹಕ್ಕನ್ನು ದುರ್ಬಲಗೊಳಿಸುತ್ತದೆ. ಇದರಿಂದ ಕಾರ್ಮಿಕ ವರ್ಗದವರಿಗೆ ಸಮಸ್ಯೆಯಾಗಲಿದೆ. ಹೊರಗಿನಿಂದ ನೋಡುವಾಗ ದಿನಗಳ ಸಂಖ್ಯೆ ಹೆಚ್ಚಿಸಿದಂತೆ ಕಾಣುತ್ತದೆ. ಆದರೆ ನೀವು ಕೂಲಿ ಹೆಚ್ಚಿಸಿದ್ದೀರಾ ಎಂದು ಪ್ರಶ್ನಿಸಿದರು.
ಈ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರು ಇದು ಕೇವಲ ಹೆಸರು ಬದಲಾವಣೆಯಲ್ಲ, ಇದು MGNREGA ಅನ್ನು ಮುಗಿಸಲು ಬಿಜೆಪಿ ಮತ್ತು ಆರ್‌ಎಸ್‌ಎಸ್ ನಡೆಸುತ್ತಿರುವ ಪಿತೂರಿ. ವಿದೇಶದಲ್ಲಿ ಗಾಂಧೀಜಿ ಪ್ರತಿಮೆಗೆ ಹೂವು ಇಡುವ ಮೋದಿ ಸರ್ಕಾರ, ದೇಶದಲ್ಲಿ ಅವರ ಹೆಸರನ್ನು ಅಳಿಸುತ್ತಿದೆ ಎಂದು ಕಿಡಿಕಾರಿದ್ದಾರೆ. ಈ ವೇಳೆ ಬಿಜೆಪಿ ನಾಯಕರು ರಾಮನ ಹೆಸರಿರುವುದು ಕಾಂಗ್ರೆಸ್‌ಗೆ ಸಹಿಸಲಾಗುತ್ತಿಲ್ಲ ಹೀಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.



