ಬೆಂಗಳೂರು : ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿಯವರು ಹಲವಾರು ಭ್ರಷ್ಟಾಚಾರ ಹಗರಣಗಳಲ್ಲಿ ಭಾಗಿಯಾಗಿ ವಿಚಾರಣೆ ನಡೆಸಿದರೂ ಸಹ ಇನ್ನು ವರದಿ ಬಂದಿಲ್ಲ ಹಾಗೂ ಅವರ ವಿರುದ್ದ ಕ್ರಮವನ್ನು ಏಕೆ ತೆಗೆದುಕೊಂಡಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ವಿಧಾನ ಪರಿಷತ್‌ನಲ್ಲಿ ಸರ್ಕಾರವನ್ನು ಪ್ರಶ್ನಿಸಿದರು.
ವಿಧಾನ ಪರಿಷತ್‌ನಲ್ಲಿ ಮಾತನಾಡಿದ ಅವರು, ರೋಹಿಣಿ ಸಿಂಧೂರಿಯವರು ಚಾಮರಾಜನಗರದಲ್ಲಿ ಕೊರೋನಾ ಸಂದರ್ಭದಲ್ಲಿ ಆಕ್ಸಿಜನ್ ನೀಡದೆ ೩೨ ಜನರ ಸಾವಿಗೆ ಕಾರಣರಾಗಿದ್ದಾರೆ. ಬ್ಯಾಗ್ ಹಗರಣದಲ್ಲಿ ಅವ್ಯವಹಾರ ಮಾಡಿದ್ದಾರೆ. ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸ ಪಾರಂಪರಿಕ ಕಟ್ಟಡವಾಗಿದ್ದರೂ ಸಹ ೫೦ ಲಕ್ಷ ರೂ.ನಲ್ಲಿ ಈಜುಕೊಳ ನಿರ್ಮಾಣ ಮಾಡಿರುವುದು ಕಾನೂನಿಗೆ ವಿರುದ್ದವಾಗಿದೆ ಎಂದು ವರದಿ ಕೊಟ್ಟಿದ್ದರು ಸಹ ಸರ್ಕಾರ ಇದುವರೆಗೆ ಕ್ರಮಕೈಗೊಂಡಿಲ್ಲ ಏಕೆ ಎಂದ ಅವರು ಕಾನೂನು ಸುವ್ಯವಸ್ಥೆಗೆ ರಾಜ್ಯದಲ್ಲಿ ಪೊಲೀಸರು ಬೇಕು ರಾಜಕಾರಣಿಗಳು ಅಧಿಕಾರಿಗಳನ್ನು ಕಾಯಲು ಪೊಲೀಸ್ ಬೇಕು ಆದರೆ ಬಿ ಕ್ಯಾಪ್ ಕೊಡಿ ಎಂದು ನಾನು ಮನವಿ ಮಾಡಿದರೂ ಇನ್ನೂ ಕೊಟ್ಟಿಲ್ಲ. ಸರ್ಕಾರಿ ಕೆಲಸದಲ್ಲಿ ಪೊಲೀಸರ ಮಕ್ಕಳಿಗೆ ಶೇ. ೫% ಮೀಸಲಾತಿ ನೀಡಬೇಕು.
ಸರ್ಕಾರದಲ್ಲಿ ಹಣದ ಕೊರತೆ ಇಲ್ಲ ಎನ್ನುತ್ತಾರೆ. ಗ್ಯಾರಂಟಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡುತ್ತಾರೆ ಆದರೆ ಎಂ.ಎಲ್.ಎ., ಎಂ.ಎಲ್.ಸಿ. ಗಳಿಗೆ ಬರುವ ಅನುದಾನ ಇನ್ನೂ ಬಂದಿಲ್ಲ ಎಂದ ಅವರು, ಸರ್ಕಾರ ಕೂಡಲೆ ರೋಹಿಣಿ ಸಿಂಧೂರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಪೊಲೀಸ್ ಇಲಾಖೆಯನ್ನು ಸುಭದ್ರಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.