ನಂಜನಗೂಡು: ತಾಳಿ ಕಟ್ಟಿದ ಪತಿಯನ್ನೇ ಪತ್ನಿ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಹುಲ್ಲಹಳ್ಳಿ ಹೋಬಳಿಯ ಇಂದಿರಾ ನಗರ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ವೀರಣ್ಣ( 41) ಪತ್ನಿಯಿಂದಲೇ ಕೊಲೆಯಾದ ದುರ್ದೈವಿ ಪತಿ.
ಘಟನೆ ವಿವರ: ಶನಿವಾರ ರಾತ್ರಿ ಸುಮಾರು 7 ಗಂಟೆ ಸಮಯದಲ್ಲಿ ಶಿವಮ್ಮಳ ಗಂಡ ವೀರಣ್ಣ ಕೂಲಿ ಕೆಲಸ ಮುಗಿಸಿ ಮನೆಗೆ ಆಗಮಿಸಿದ್ದಾನೆ. ಈ ಸಂದರ್ಭದಲ್ಲಿ ಹೆಂಡತಿ ಫೋನಿನಲ್ಲಿ ಮಾತನಾಡುತ್ತಿರುತ್ತಾಳೆ. ಈ ವಿಚಾರವಾಗಿ ಇಬ್ಬರಿಗೂ ಜಗಳ ಪ್ರಾರಂಭಗೊಳ್ಳುತ್ತದೆ. ಸುಮಾರು ಹೊತ್ತಿನವರೆಗೂ ಜಗಳ ನಡೆಯುತ್ತಿರುತ್ತದೆ. ಕೆಲ ಸಮಯದ ಆನಂತರ ಇದ್ದಕ್ಕಿದ್ದ ಹಾಗೆ ಜಗಳ ಕೊನೆಗೊಳ್ಳುತ್ತದೆ. ಬಳಿಕ ತಮ್ಮನಾದ ಮಾದಪ್ಪನಿಗೆ ಅನುಮಾನ ಬಂದು ಅಣ್ಣನ ಮನೆಗೆ ಹೋದಾಗ ಬಾಗಿಲು ಮುಚ್ಚಲಾಗಿತ್ತು. ತಕ್ಷಣವೇ ತೆರೆದು ನೋಡಿದಾಗ ಅತ್ತಿಗೆ, ಅಣ್ಣನ ಕುತ್ತಿಗೆ ಭಾಗಕ್ಕೆ ಸೀರೆಯನ್ನು ಸುತ್ತುತ್ತಿದ್ದು ಕಂಡುಬಂದಿದ್ದು, ತಕ್ಷಣವೇ ಮಾದಪ್ಪನ ಕಂಡು ವೀರಣ್ಣನ ಪತ್ನಿ ಶಿವಮ್ಮ ಮನೆಯಿಂದ ಓಡಿ ಹೋಗಿದ್ದಾಳೆ.
ತಕ್ಷಣವೇ ಶಿವಮ್ಮನನ್ನು ಹಿಡಿದುಕೊಳ್ಳುವಂತೆ ಕೂಗಿಕೊಂಡಾಗ ಅಕ್ಕಪಕ್ಕದ ಮನೆಯವರು ಹಿಡಿದಿದ್ದಾರೆ. ನನ್ನ ಅಣ್ಣನ ಸಾವಿಗೆ ಅತ್ತಿಗೆ ಶಿವಮ್ಮನೆ ಕಾರಣ ಎಂದು ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ವೀರಣ್ಣನ ಸಾವಿಗೆ ಅಕ್ರಮ ಸಂಬಂಧವೇ ಕಾರಣ ಎನ್ನಲಾಗಿದ್ದು, ಪ್ರತಿದಿನ ಇದೇ ವಿಚಾರಕ್ಕೆ ಜಗಳ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.
ಈ ಸಂಬಂಧ ಹುಲ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.



