ಚಿಕ್ಕಮಗಳೂರು : ಗಂಡನ ಜತೆ ಭಿನ್ನಾಭಿಪ್ರಾಯ ಹೊಂದಿದ್ದ ಪತ್ನಿಯನ್ನು ಪತಿಯೇ ಕೊಚ್ಚಿ ಕೊಲೆಗೈದ ದಾರುಣ ಘಟನೆ ಚಿಕ್ಕಮಗಳೂರಲ್ಲಿ ನಡೆದಿದೆ.
ಚಿಕ್ಕಮಗಳೂರಿನ ಆಲ್ದೂರು ಪಟ್ಟಣ ಸಮೀಪದ ಹವ್ವಳ್ಳಿ ಗ್ರಾಮದಲ್ಲಿ ನಡೆದಿದೆ.34 ವರ್ಷದ ನೇತ್ರಾವತಿ ಕೊಲೆಯಾದ ದುರ್ದೈವಿ ಆಗಿದ್ದಾರೆ. ನೇತ್ರಾವತಿ ಸಕಲೇಶಪುರದ ನವೀನ್ ಜೊತೆ ಕಳೆದ 5 ತಿಂಗಳ ಹಿಂದೆ ವಿವಾಹವಾಗಿದ್ದರು. ಕೌಟುಂಬಿಕ ಕಲಹದಿಂದ ನೇತ್ರಾವತಿ ತವರು ಮನೆ ಸೇರಿದ್ದಳು. ಇಬ್ಬರ ನಡುವೆ ರಾಜೀ ಸಂಧಾನ ಕೂಡ ಪ್ರಯತ್ನ ಕೂಡ ನಡೆದಿತ್ತು.
ಎರಡು ಕುಟುಂಬದ ಹಿರಿಯರು ಇಬ್ಬರನ್ನು ಒಂದು ಮಾಡುವ ಪ್ರಯತ್ನ ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಗಂಡ ನವೀನ್ನಿಂದ ಸಂಪೂರ್ಣ ದೂರವಾಗುವ ಯೋಚನೆ ಮಾಡಿದ್ದ ನೇತ್ರಾವತಿ ವಿಚ್ಛೇದನ ನೀಡಲು ಸಿದ್ದತೆ ನಡೆಸಿದ್ದರು. ಇಷ್ಟರಲ್ಲಿಯೇ ಅವಘಡ ನಡೆದುಹೋಗಿದೆ.
ಇನ್ನು ನೇತ್ರಾವತಿ ಮೂರು ದಿನಗಳ ಹಿಂದೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪತಿ ನವೀನ್ ವಿರುದ್ಧ ಕಿರುಕುಳದ ದೂರು ನೀಡಿದ್ದರು. ಪೊಲೀಸರು ದೂರು ಸ್ವೀಕರಿಸಿದ್ದರು. ವಿಚ್ಛೇದನ ಮತ್ತು ಪೊಲೀಸರಿಗೆ ದೂರು ನೀಡಿರುವ ವಿಷಯ ತಿಳಿದ ಪತಿ ನವೀನ್ ಕೋಪಗೊಂಡಿದ್ದನು. ಇದೀಗ ಪತ್ನಿ ನೇತ್ರಾವತಿಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ನವೀನ್ ವಶಕ್ಕೆ ಪಡೆದಿರುವ ಸ್ಥಳೀಯ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.