ನಂಜನಗೂಡು: ಪತಿಯನ್ನ ಮುಗಿಸಲು ಪತ್ನಿಯೇ ಸ್ಕೆಚ್ ಹಾಕಿ ಸಿಕ್ಕಿಬಿದ್ದ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ನಡೆದಿದೆ. ಪತಿಯನ್ನ ಮುಗಿಸಲು ಸಹೋದರನ ನೆರವನ್ನು ಪಡೆದು ದರೋಡೆ ಸನ್ನಿವೇಶ ಸೃಷ್ಟಿಸಿ ತಪ್ಪಿಸಿಕೊಳ್ಳುವ ಹುನ್ನಾರ ನಡೆಸಿದ ಪತ್ನಿ ಪೊಲೀಸರು ಹೆಣೆದ ಬಲೆಗೆ ಸಿಲುಕಿದ್ದಾಳೆ. ಸಹೋದರ ಹಾಗೂ ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿದಂತೆ ನಾಲ್ವರನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಕಂಪ್ಯೂಟರ್ ಆಪರೇಟರ್ ಆಗಿರುವ ಪತ್ನಿ ಸಂಗೀತಾ ಈಕೆ ಸಹೋದರ ಸಂಜಯ್ ಈತನ ಸ್ನೇಹಿತ ವಿಘ್ನೇಶ್ ಹಾಗೂ ಸಂಘರ್ಷಕ್ಕೆ ಒಳಗಾದ ಬಾಲಕ ನಾಲ್ವರು ಬಂಧಿತರು. ಡ್ರಾಗರ್ ನಿಂದ ಇರಿದು ಹತ್ಯೆಯ ಸಂಚಿಗೆ ಸಿಲುಕಿ ಗಾಯಗೊಂಡ ರಾಜೇಂದ್ರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜೇಂದ್ರ ಫೈಬರ್ ಡೋರ್ ಗಳನ್ನ ಫಿಟ್ ಮಾಡುವ ವೃತ್ತಿ ನಡೆಸುತ್ತಿದ್ದು ಈ ನಡುವೆ ಪತ್ನಿ ಸಂಗೀತಾ ಜೊತೆ ಭಿನ್ನಾಭಿಪ್ರಾಯವಿತ್ತು ಎನ್ನಲಾಗಿದೆ. ಕೌಟುಂಬಿಕ ಕಲಹದ ಹಿನ್ನಲೆ ಇಬ್ಬರ ನಡುವೆ ಸಾಮರಸ್ಯ ಇರಲಿಲ್ಲ. ಅಕ್ಟೋಬರ್ 25 ರಂದು ರಾಜೇಂದ್ರ ಪತ್ನಿ ಸಂಗೀತಾಳನ್ನ ತಮ್ಮ ಸ್ಕೂಟರ್ ನಲ್ಲಿ ನಂಜನಗೂಡಿನ ಹುಂಡುವಿನಹಳ್ಳಿ ಬಡಾವಣೆಯ ಮುಡಾ ಲೇಔಟ್ ಬಳಿ ತೆರಳುತ್ತಿದ್ದ ಸಮಯದಲ್ಲಿ ಮುಂದೆ ಸಾಗುತ್ತಿದ್ದ ಬಿಳಿ ಬಣ್ಣದ ಕಾರು ಅಡ್ಡವಾಗಿ ನಿಂತಿದೆ. ಕಾರಿನಲ್ಲಿದ್ದ ವ್ಯಕ್ತಿ ಹತ್ತಿರ ಬಂದು ಸ್ಕೂಟರ್ ಬೀಳಿಸಿದ್ದಾನೆ. ರಾಜೇಂದ್ರ ಹಾಗೂ ಸಂಗೀತಾ ಕೆಳಗೆ ಬಿದ್ದಿದ್ದಾರೆ. ಈ ವೇಳೆ ವ್ಯಕ್ತಿ ರಾಜೇಂದ್ರ ಜೊತೆ ಜಗಳ ಮಾಡಿದ್ದಾನೆ. ಇದೇ ವೇಳೆ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಸಂಗೀತಾ ಬಳಿ ಬಂದು ಕುತ್ತಿಗೆಯಲ್ಲಿದ್ದ ಚೈನ್ ಕಸಿಯಲು ಯತ್ನಿಸಿದ್ದಾರೆ.
ಈ ವೇಳೆ ವ್ಯಕ್ತಿ ಹರಿತವಾದ ಆಯುಧದಿಂದ ರಾಜೇಂದ್ರಗೆ ಇರಿದಿದ್ದಾನೆ. ಈ ಸಂಧರ್ಭದಲ್ಲಿ ಒಂದು ವಾಹನ ಬಂದಾಗ ಮೂವರು ವ್ಯಕ್ತಿಗಳು ಪರಾರಿಯಾಗಿದ್ದಾರೆ. ಘಟನೆ ಸಂಬಂಧ ರಾಜೇಂದ್ರ ಆಸ್ಪತ್ರೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಅಲರ್ಟ್ ಆದ ನಂಜನಗೂಡು ಪೊಲೀಸರು ಎಸ್ಪಿ ವಿಷ್ಣುವರ್ಧನ್, ಅಡಿಷನಲ್ ಎಸ್ಪಿ ಮಲ್ಲಿಕ್ ಹಾಗೂ ನಾಗೇಶ್, ಡಿವೈಎಸ್ಪಿ ರಘು ರವರ ಮಾರ್ಗದರ್ಶನದಲ್ಲಿ ಹಾಗೂ ಇನ್ಸ್ ಪೆಕ್ಟರ್ ರವೀಂದ್ರ, ಪಿಎಸ್ ಐಗಳಾದ ಕೃಷ್ಣಕಾಂತ ಕೋಳಿಮಂಜುನಾಥ್ ಎಎಸ್ ಐ ದೇವರಾಜಯ್ಯ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕೃಷ್ಣ,ಶಿವಕುಮಾರ್,ತಿಮ್ಮಯ್ಯ, ಮಹೇಶ್, ಚೇತನ್, ನವೀನ್ ಕುಮಾರ್,ಪೀರಪ್ಪ ಹಾದಿಮನಿ, ರವಿಕುಮಾರ್, ಮಹಿಳಾ ಸಿಬ್ಬಂದಿಗಳಾದ ಸರಿತಾ, ಸಹನ ಹಾಗೂ ಚಾಲಕ ಕೃಷ್ಣ ರವರನ್ನೊಳಗೊಂಡ ತಂಡ ರಚಿಸಲಾಗಿದೆ.
ಘಟನೆ ನಡೆದ ಸ್ಥಳ, ಸಿಸಿ ಕ್ಯಾಮರಾ ನೆರವು ಹಾಗೂ ವೈಜ್ಞಾನಿಕ ಅಂಶಗಳ ನೆರವಿನಿಂದ ತೆನಿಖೆ ಆರಂಭಿಸಿದಾಗ ಪತ್ನಿ ಸಂಗೀತಾ ಸ್ಕೆಚ್ ಬಯಲಾಗಿದೆ.ಸಂಜೆ 7.30 ರ ಸಮಯದಲ್ಲಿ ದಂಪತಿ ಬೈಕ್ ನಲ್ಲಿ ತೆರಳುತ್ತಿದ್ದಾಗ ಅಪರಿಚಿತರಂತೆ ಅಟ್ಯಾಕ್ ಮಾಡಿದ್ದಾರೆ. ಡ್ರಾಗರ್ ನಿಂದ ಚುಚ್ಚಿ ರಾಜೇಂದ್ರ ರನ್ನ ಮುಗಿಸುವ ಸ್ಕೆಚ್ ನಡೆದಿದೆ. ಅಷ್ಟರಲ್ಲಿ ವಾಹನವೊಂದು ಬಂದ ಪರಿಣಾಮ ಹತ್ಯೆ ಸ್ಕೆಚ್ ಮಿಸ್ ಆಗಿದೆ. ಸಂಗೀತಾಳನ್ನ ತೀವ್ರವಾಗಿ ವಿಚಾರಣೆಗೆ ಒಳಪಡಿಸಿದಾಗ ಹತ್ಯೆ ಸಂಚು ಬಯಲಾಗಿದೆ.



