ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಕೆಕ್ಕನಹಳ್ಳ ರಸ್ತೆಯಲ್ಲಿ ಕಾಡಾನೆಯೊಂದು ವ್ಯಕ್ತಿ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ. ಕಾಡಿನ ರಸ್ತೆ ಬದಿಯಲ್ಲಿ ನಿಂತಿದ್ದ ಆನೆಗೆ ಪ್ರವಾಸಿಗರು ಕಿರುಚಾಡಿ ಹುಚ್ಚಾಟ ಮಾಡಿದ್ದರಿಂದ ಆನೆ ಉದ್ವಿಗ್ನಗೊಂಡಿದೆ. ಕೇರಳದ ಪ್ರವಾಸಿಗನೊಬ್ಬ ಆನೆಯ ಸಮೀಪದಲ್ಲಿ ಫೋಟೋ ತೆಗೆದುಕೊಳ್ಳಲು ಮುಂದಾದಾಗ ಆನೆ ಆತನ ಮೇಲೆ ಅಟ್ಯಾಕ್ ಮಾಡಿದೆ.
ಆನೆ ಆತನ ಬೆನ್ನು ಹತ್ತಿ ಗುಮ್ಮಲು ಹೋಗಿದ್ದು, ಓಡುತ್ತಿರುವಾಗ ರಸ್ತೆ ಮೇಲೆ ಬಿದ್ದು ಗಾಯಗೊಂಡಿದ್ದಾನೆ. ಆತನನ್ನು ಕಾಲಿನಿಂದ ಒದ್ದು ಬಳಿಕ ಆನೆ ಅರಣ್ಯಕ್ಕೊಳಗೇ ಹಿಂತಿರುಗಿದೆ. ಗಾಯಗೊಂಡ ಪ್ರವಾಸಿಗನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವನು ಅದೃಷ್ಟವಶಾತ್ ಬದುಕುಳಿದಿದ್ದಾನೆ. ಆನೆ ದಾಳಿಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಾಡು ಪ್ರದೇಶದಲ್ಲಿ ಮನುಷ್ಯರು ಜಾಣ್ಮೆಯಿಂದ ವರ್ತಿಸದಿದ್ದರೆ ಈ ರೀತಿಯ ದುರ್ಘಟನೆಗಳು ಸಂಭವಿಸಬಹುದೆಂದು ಅರಣ್ಯಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.