ಹುಲಿ, ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಪ್ರತಿಬಂಧಕಾಜ್ಞೆ ವಿಧಿಸಲು ಈಶ್ವರ ಖಂಡ್ರೆ ಸೂಚನೆ
ಬಂಡೀಪುರ: ಮಾನವ ವನ್ಯಜೀವಿ ಸಂಘರ್ಷ ನಿಯಂತ್ರಿಸಲು ಸ್ಥಳೀಯ ಜನಪ್ರತಿನಿಧಿಗಳು ಎನ್.ಜಿ.ಓ., ಪರಿಸರ ತಜ್ಞರನ್ನು ಒಳಗೊಂಡ ರಾಜ್ಯಮಟ್ಟದ ವನ್ಯಜೀವಿ ಮಾನವ ಸಂಘರ್ಷ ನಿರ್ವಹಣಾ ಕಾರ್ಯಪಡೆ ರಚಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ.
ಸರಗೂರು ತಾಲೂಕಿನಲ್ಲಿ ಹುಲಿ ದಾಳಿಯ 2 ಪ್ರಕರಣ ನಡೆದಿದ್ದು, ಒಬ್ಬರು ತೀವ್ರವಾಗಿ ಗಾಯಗೊಂಡು, ಮತ್ತೊಬರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಬಂಡೀಪುರದಲ್ಲಿಂದು ವನ್ಯಜೀವಿ ವಿಭಾಗದ ಉನ್ನತಾಧಿಕಾರಿಗಳ ತುರ್ತು ಸಭೆ ನಡೆಸಿದ ಅವರು, ಈ ಕಾರ್ಯಪಡೆ ಕಾಡಿನಂಚಿನ ಗ್ರಾಮಗಳ ಜನರಿಗೆ ವನ್ಯ ಜೀವಿಗಳೊಂದಿಗೆ ಸಹಬಾಳ್ವೆ ನಡೆಸುವುದು ಹೇಗೆ. ವನ್ಯಜೀವಿಗಳ ವಿಚಾರದಲ್ಲಿ ಏನೆಲ್ಲಾ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂಬ ಜಾಗೃತಿ ಮೂಡಿಸಲಿದ್ದಾರೆ ಎಂದರು.
ಜೊತೆಗೆ ಕಾಡಿನಂಚಿನ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ವನ್ಯಜೀವಿ ವಿಚಾರದಲ್ಲಿ ಹೇಗೆ ಸಂವೇದನಾಶೀಲರಾಗಿರಬೇಕು ಎಂಬ ಬಗ್ಗೆ ಮಾಹಿತಿ ನೀಡಲಿದ್ದಾರೆ. ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ಸ್ನೇಹಸೇತುವಾಗಿ ಈ ಕಾರ್ಯಪಡೆ ಕಾರ್ಯನಿರ್ವಹಿಸಲಿದೆ ಎಂದರು.
ಆನೆ, ಹುಲಿ, ಚಿರತೆ ಸೇರಿದಂತೆ ಯಾವುದೇ ವನ್ಯಜೀವಿ ಸೆರೆ ಕಾರ್ಯಾಚರಣೆ ವೇಳೆ ಪ್ರಮಾಣಿತ ಮಾನದಂಡ (ಎಸ್.ಓ.ಪಿ.) ಪಾಲಿಸಬೇಕು. 155 ಸೆಕ್ಷನ್ ಅಡಿಯಲ್ಲಿ ನಿರ್ಬಂಧಕಾಜ್ಞೆ ಜಾರಿ ಮಾಡಿ ಕಾರ್ಯಾಚರಣೆ ನಡೆಸಬೇಕು ಎಂದರು.
ಅರಣ್ಯ ಸಿಬ್ಬಂದಿ, ಅರಣ್ಯಾಧಿಕಾರಿಗಳು ಅರಣ್ಯದಂಚಿನ ಗ್ರಾಮಸ್ಥರೊಂದಿಗೆ ಸೌಹಾರ್ದತೆ ಕಾಪಾಡಿಕೊಳ್ಳಬೇಕು. ಸ್ನೇಹಪರವಾಗಿರಿಬೇಕು ಮತ್ತು ಆನೆ, ಹುಲಿ ವಸತಿ ಪ್ರದೇಶದಲ್ಲಿ ಬಂದರೆ ಕೂಡಲೇ ಮೈಕ್ ಗಳ ಮೂಲಕ ಜನರಿಗೆ ಮಾಹಿತಿ ನೀಡಬೇಕು. ಸಾಮಾಜಿಕ ತಾಣಗಳ ಮೂಲಕ ಸಕಾಲದಲ್ಲಿ ಮಾಹಿತಿ ರವಾನಿಸಬೇಕು ಎಂದರು.
ಥರ್ಮಲ್ ಕ್ಯಾಮರಾ, ಡ್ರೋನ್ ಸೇರಿದಂತೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ವನ್ಯಜೀವಿಗಳು ವಸತಿ ಪ್ರದೇಶಗಳ ಬಳಿ ಮತ್ತು ಕಾಡಿನಂಚಿನ ಗ್ರಾಮಗಳ ಹೊಲ ಗದ್ದೆಗಳ ಸಮೀಪ ಕಾಣಿಸಿಕೊಂಡಾಗ ತತ್ ಕ್ಷಣವೇ ಜನರಿಗೆ ವಾಟ್ಸ್ ಅಪ್ ಸಂದೇಶಗಳ ಮೂಲಕ ಮಾಹಿತಿ ನೀಡಲು ಸಮಗ್ರ ಕಮಾಂಡ್ ಸೆಂಟರ್ ಸ್ಥಾಪಿಸಲು ಈಗಾಗಲೇ ಸೂಚನೆ ನೀಡಲಾಗಿದ್ದು ತುರ್ತು ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳಿಂದ ಜನರಿಗಾಗಲೀ, ಜನರಿಂದ ವನ್ಯಜೀವಿಗಳಿಗಾಗಲೀ ತೊಂದರೆ ಆಗದಂತೆ, ಬೆಳೆ ಹಾನಿ ಆಗದಂತೆ ನಿಗಾ ಇಡಲು ಗಸ್ತು ಹೆಚ್ಚಳದ ಅಗತ್ಯವಿದೆ. ಆದರೆ, ಇದಕ್ಕೆ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆ ಇದ್ದು, ಹುದ್ದೆಗಳ ಭರ್ತಿಗೆ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಗತ್ಯ ಇರುವ ಮುಂಚೂಣಿ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಬೇಕು. ಆನೆ, ಹುಲಿಗಳು ಸೇರಿದಂತೆ ವನ್ಯಜೀವಿ ಕಾಡಿನಿಂದ ಹೊರಗೆ ಹೋಗದಂತೆ ನಿಯಂತ್ರಿಸಲು ಏನೆಲ್ಲಾ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ 5 ದಿನಗಳ ಒಳಗಾಗಿ ವರದಿ ಸಲ್ಲಿಸಿ ಎಂದೂ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸೂಚನೆ ನೀಡಿದರು.
ಅಗತ್ಯ ಇರುವ ಕಡೆಯಲ್ಲಿ ಟೆಂಟಕಲ್ ಫೆನ್ಸಿಂಗ್, ಸೌರ ತಂತಿ ಬೇಲಿ, ಆನೆ ಕಂದಕ ಅಳವಡಿಸಲು ಹಾಗೂ ರೈಲ್ವೆ ಬ್ಯಾರಿಕೇಡ್ ಗೆ ಚೈನ್ ಲಿಂಕ್ ಬೇಲಿ ಹಾಕಲು ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.
ಸಭೆಯಲ್ಲಿ ಶಾಸಕರುಗಳಾದ ಅನಿಲ್ ಚಿಕ್ಕಮಾದು, ಗಣೇಶ್ ಪ್ರಸಾದ್, ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ. ರೇ, ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್, ಎ.ಪಿ.ಸಿಸಿಎಫ್ ಮನೋಜ್ ರಾಜನ್, ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮತ್ತು ಪೊಲಿಸ್ ವರಿಷ್ಠಾಧಿಕಾರಿ ಕವಿತಾ ಮತ್ತಿತರರು ಪಾಲ್ಗೊಂಡಿದ್ದರು.
ರೈತರ ಅಹವಾಲು ಆಲಿಸಿದ ಸಚಿವರು:
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಮೈಸೂರಿನಿಂದ ಬಂಡೀಪುರಕ್ಕೆ ಬರುವ ಮಾರ್ಗದಲ್ಲಿ ನಾಲ್ಕೈದು ರೈತ ಸಂಘಟನೆಯ ಪ್ರತಿನಿಧಿಗಳು ತಮ್ಮನ್ನು ಭೇಟಿ ಮಾಡಿ ಕಾಡಿನಲ್ಲಿ ಸಫಾರಿ ನಡೆಸುವುದರಿಂದ ವನ್ಯಜೀವಿಗಳು ಹೊರ ಬರುತ್ತಿವೆ. ಹೀಗಾಗಿ ಸಫಾರಿ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಸಭೆ ಕರೆದು ಸಮಾಲೋಚಿಸಲಾಗುವುದು ಎಂದರು.
ರೈತರಿಗೆ ನೆರವಾಗಲು ಸೂಚನೆ:
ರೈತರು ತಮ್ಮ ಜಮೀನಿನಲ್ಲಿ ಬೆಳೆಸಿದ ತೇಗ, ಶ್ರೀಗಂಧ ಇತ್ಯಾದಿ ವೃಕ್ಷಗಳನ್ನು ಕಡಿಯಲು ಅನುಮತಿ ನೀಡುವ ಮತ್ತು ಸಾಗಾಟಕ್ಕೆ ಅನುಮತಿ ನೀಡುವಲ್ಲಿ ವಿಳಂಬ ಆಗುತ್ತಿರುವ ಬಗ್ಗೆ ರೈತ ಸಂಘಟನೆಗಳು ದೂರು ನೀಡಿದ್ದು, ತ್ವರಿತವಾಗಿ ರೈತರ ಸಮಸ್ಯೆಗೆ ಸ್ಪಂದಿಸುವಂತೆ ಸೂಚಿಸಿದರು.
ಕಾಳಿಂಗ ಸರ್ಪಗಳ ಸಂಶೋಧನೆ ಹೆಸರಲ್ಲಿ ಶೋಷಣೆ ನಡೆಯುತ್ತಿರುವ ಬಗ್ಗೆ ತನಿಖೆಗೆ ಆದೇಶಿ 50 ದಿನ ಕಳೆದರೂ ಇನ್ನೂ ಕ್ರಮ ಏಕೆ ಆಗಿಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ವರದಿ ಪಿಸಿಸಿಎಫ್ ಗೆ ಸಲ್ಲಿಕೆಯಾಗಿದೆ. ವರದಿ ಪರಾಮರ್ಶಿಸಿ ಸತ್ಯಾಸತ್ಯತೆಯ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.



