ಬೆಂಗಳೂರು: ಮಹಾರಾಷ್ಟ್ರ ರಾಜ್ಯದಲ್ಲಿ ಕಾಂಗ್ರೆಸ್ಸಿಗರೆಲ್ಲರೂ ಈ ಸಾರಿ ಬಿಜೆಪಿಯನ್ನು ಬೆಂಬಲಿಸಿದ್ದು, ಅದರಿಂದ ನಾವು ಗೆದ್ದೆವು ಎಂದರೆ ಡಿ.ಕೆ.ಶಿವಕುಮಾರರು ಒಪ್ಪುತ್ತಾರಾ? ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ೩ ಕ್ಷೇತ್ರಗಳನ್ನು ಗೆದ್ದ ಕಾಂಗ್ರೆಸ್ ಪಕ್ಷ ೩ ಲೋಕ-೩ ರಾಜ್ಯಗಳನ್ನು ಗೆದ್ದಂತೆ ವಿಜೃಂಭಿಸುತ್ತಿದೆ. ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು, ಜೆಡಿಎಸ್- ಬಿಜೆಪಿ ನಾಯಕರು ತಮ್ಮನ್ನು ಬೆಂಬಲಿಸಿದ್ದಾಗಿ ಹೇಳಿದ್ದು, ಇದೊಂದು ಶುದ್ಧ ಸುಳ್ಳು ಮತ್ತು ದಾರಿ ತಪ್ಪಿಸುವ ಕೆಲಸ ಎಂದು ಖಂಡಿಸಿದರು.
೩ ಕ್ಷೇತ್ರಗಳ ಗೆಲುವು ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರಕ್ಕೆ ಜನರು ಕೊಟ್ಟ ಲೈಸನ್ಸ್ ಅಲ್ಲ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರರು ತಿಳಿದುಕೊಳ್ಳಲಿ ಎಂದು ತಿಳಿಸಿದರು. ಸೋತಲ್ಲೆಲ್ಲ ಇವಿಎಂ ತಿರುಚಿದ್ದಾರೆ ಎನ್ನುವ ಕಾಂಗ್ರೆಸ್ಸಿಗರಿಗೆ ಇಲ್ಲಿ ೩ ಸ್ಥಾನ ಗೆದ್ದ ಮೇಲೆ ಇವಿಎಂ ತಿರುಚಿಲ್ಲ ಎಂಬ ನಂಬಿಕೆ ಬಂದಿರಬಹುದು ಎಂದು ವ್ಯಂಗ್ಯವಾಡಿದರು. ಮಹಾರಾಷ್ಟ್ರದಲ್ಲಿ ಇವಿಎಂ ತಿರುಚಿದ್ದರೆ, ಜಾರ್ಖಂಡ್, ವಯನಾಡಿನಲ್ಲಿ ಬಿಜೆಪಿಯವರಿಗೆ ಯಾಕೆ ಇವಿಎಂ ತಿರುಚಲು ಸಾಧ್ಯವಾಗಿಲ್ಲ ಎಂದು ಕೇಳಿದರು.
ಕಾಂಗ್ರೆಸ್ಸಿನವರು ವಯನಾಡ್ ಬಿಟ್ಟು ಇನ್ಯಾವುದನ್ನೂ ಗೆಲ್ಲದಿದ್ದರೆ ಪರವಾಗಿಲ್ಲ ಎಂಬಂತೆ ಇದ್ದರು. ಅವರಿಗೆ ಆ ಕುಟುಂಬ ಮುಖ್ಯವೇ ಹೊರತು ಬೇರೆ ರಾಜಕಾರಣ ಪ್ರಮುಖವಲ್ಲ ಎಂದು ತೋರಿಸಿದ್ದಾರೆ ಎಂದ ಅವರು, ವಕ್ಫ್ ಬೋರ್ಡ್ ವಿಚಾರದಲ್ಲಿ ಡಿ.೪ರಿಂದ ಜಿಲ್ಲೆಗಳಿಗೆ ತಂಡಗಳ ಭೇಟಿ ಇದೆ ಎಂದರು. ಸಂವಿಧಾನದಲ್ಲಿ ವಕ್ಫ್ ಬೋರ್ಡಿನ ಪ್ರಸ್ತಾಪವೇ ಇಲ್ಲ; ಆ ಕುರಿತು ಸುಳ್ಳು ಹೇಳುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ- ಆರೆಸ್ಸೆಸ್ ವಿಷಸರ್ಪವಿದ್ದಂತೆ; ಅದನ್ನು ಕೊಲ್ಲಬೇಕೆಂದು ಖರ್ಗೆಯವರು ಹೇಳಿದ್ದಾರೆ. ಆದರೆ, ವಿಷ ಸರ್ಪಗಳು ಯಾವುದು? ದೇಶಭಕ್ತರನ್ನು ವಿಷ ಸರ್ಪಕ್ಕೆ ಹೋಲಿಸುವ ನೀವು, ದೇಶದ್ರೋಹಿಗಳು, ಭಯೋತ್ಪಾದಕರನ್ನು ನಿಗ್ರಹಿಸುವ ಮತ್ತು ಕೊಲ್ಲುವ ಮಾತನಾಡುವುದಿಲ್ಲ ಯಾಕೆ ಎಂದು ಪ್ರಶ್ನೆಯನ್ನು ಮುಂದಿಟ್ಟರು. ನೀವು ಅವರ ಪರವೇ? ಇದು ಕಾಂಗ್ರೆಸ್ ನೀತಿಯೇ ಎಂದು ಕೇಳಿದರು. ಕಾಂಗ್ರೆಸ್ ನಶಿಸಿ ಹೋಗುತ್ತಿದೆ. ಮಾತನಾಡುವುದಿದ್ದರೆ ದೇಶದ್ರೋಹಿಗಳ ಬಗ್ಗೆ, ಭಯೋತ್ಪಾದಕರ ಕುರಿತು ಮಾತನಾಡಿ ಎಂದು ಆಗ್ರಹಿಸಿದರು.
ಈ ಸರಕಾರದ ಅಡಿಯಲ್ಲಿ ವಕ್ಫ್ ಬೋರ್ಡಿನ ಸರ್ವಾಧಿಕಾರದ ರೀತಿಯಲ್ಲಿ ಅರಣ್ಯಾಧಿಕಾರಿಗಳೂ ಸರ್ವಾಧಿಕಾರ ತೋರುತ್ತಿದ್ದಾರೆ. ಕೋಲಾರದಲ್ಲಿ ರಮೇಶ್ ಕುಮಾರ್ ಅವರು ಅರಣ್ಯ ಜಮೀನು ಒತ್ತುವರಿ ಮಾಡಿದ್ದನ್ನು ತೆರವು ಮಾಡಿಲ್ಲ. ಒಂದೆರಡು ಎಕರೆ ಪ್ರದೇಶದಲ್ಲಿ ದೀರ್ಘ ಕಾಲದಿಂದ ಬೆಳೆ ಬೆಳೆಯುವ ರೈತರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಈಡುಕೊಂಡಲು ಎಂಬ ಡಿಎಫ್‌ಒ ಸಚಿವರೂ ಲೆಕ್ಕಕ್ಕೆ ಇಲ್ಲದಂತೆ ಮೆರೆಯುತ್ತಿದ್ದಾರೆ ಎಂದು ಆಕ್ಷೇಪಿಸಿದರು. ೭೦೦ ಎಕರೆ ಮಾವಿನ ತೋಪನ್ನು ಕತ್ತರಿಸಿ ಹಾಕಿದ್ದಾರೆ ಎಂದು ಟೀಕಿಸಿದರು. ಸರಕಾರ ಕ್ರಮ ಕೈಗೊಂಡು ರೈತರ ನೆರವಿಗೆ ಮುಂದಾಗಲು ಆಗ್ರಹಿಸಿದರು.