ಹಾವೇರಿ : ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಹಾವೇರಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಿದ್ದರೂ, ಅದನ್ನು ಸ್ವೀಕರಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿರುವ ಅವರು, “ನನಗೆ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಿರುವುದಕ್ಕೆ ಕುಲಪತಿಗಳು, ಉಪಕುಲಪತಿಗಳು ಹಾಗೂ ಸಿಂಡಿಕೇಟ್ ಸದಸ್ಯರಿಗೆ ಹೃತ್ಪೂರ್ವಕ ಧನ್ಯವಾದಗಳು. ಆದರೆ ನಾನು ಈ ಗೌರವವನ್ನು ಸ್ವೀಕರಿಸುವುದಿಲ್ಲವೆಂದು ಈಗಾಗಲೇ ತಿಳಿಸಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿಯಾಗಿ ಯಾವುದೇ ಪ್ರಶಸ್ತಿಯನ್ನು ನಿರೀಕ್ಷಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, “ಜನರ ಪ್ರೀತಿ ಮತ್ತು ವಿಶ್ವಾಸವೇ ನನಗೆ ಅತ್ಯಂತ ದೊಡ್ಡ ಗೌರವ” ಎಂದು ಹೇಳಿದ್ದಾರೆ.
ಗೌರವ ಡಾಕ್ಟರೇಟ್ ನೀಡುವ ಮಾನದಂಡಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, “ಈ ಗೌರವವನ್ನು ದೀರ್ಘಕಾಲದಿಂದ ವಿಶಿಷ್ಟ ಸಾಧನೆ ಮಾಡಿದವರಿಗೆ ನೀಡಬೇಕು. ರಾಜಕಾರಣಿಗಳಿಗೆ ಅಥವಾ ಸಾಮಾನ್ಯ ಸಮಾಜ ಸೇವಕರಿಗೆ ನೀಡುವುದು ಸೂಕ್ತವಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ, ವಿಶ್ವವಿದ್ಯಾಲಯವು ಈ ವಿಷಯದಲ್ಲಿ ಪುನರ್ವಿಚಾರ ಮಾಡಬೇಕು ಎಂದು ವಿನಂತಿಸಿ, ಮತ್ತೊಮ್ಮೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.



