ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಹೆಚ್ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದು, ನಿಖಿಲ್ ಕುಮಾರಸ್ವಾಮಿ ಮತ್ತು ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಹೇಳಿದ್ದಾರೆ. ಮೈತ್ರಿ ಬಗ್ಗೆ ಈಗಾಗಲೇ ಚರ್ಚಿಸಲಾಗಿದೆ. 28 ಸ್ಥಾನಗಳನ್ನೂ ಗೆಲ್ಲುವ ಬಗ್ಗೆ ಚರ್ಚೆಯಾಗಿದೆ. ಜೆಡಿಎಸ್ ಮತ್ತು ಬಿಜೆಪಿ ನಡುವೆ ಕ್ಷೇತ್ರ ಹಂಚಿಕೆ ವಿಚಾರದಲ್ಲಿ ಯಾವುದೇ ಸಮಸ್ಯೆ, ಗೊಂದಲ ಇಲ್ಲ. ಯಾವ ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧಿಸುತ್ತಾರೆ ಎನ್ನುವುದನ್ನು ನಾವೇ ಪರಸ್ಪರ ಕುಳಿತು ಅಂತಿಮಗೊಳಿಸುತ್ತೇವೆ. ವಿಶ್ವಾಸ ಎರಡು ಪಕ್ಷಗಳ ನಡುವೆ ಮೂಡಬೇಕು. ಅದಕ್ಕೆ ನಾನು ಆದ್ಯತೆ ನೀಡುತ್ತಿದ್ದೇನೆ. ಜನವರಿ ಅಂತ್ಯದೊಳಗೆ ಸರ್ಕಾರದ ವೇದಿಕೆ ಸಿದ್ಧ ಮಾಡುತ್ತೇವೆ ಎಂದು ಮಾಜಿ ಸಿಎಂ ಹಾಗು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಇಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಲೋಕಸಭೆ ಚುನಾವಣೆ ಸ್ಪರ್ಧಿಸಲ್ಲ. ಆದರೆ, 28 ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ. ಇನ್ನು ನನ್ನ ಸ್ಪರ್ಧೆ ಬಗ್ಗೆ ನಮ ಪಕ್ಷದಲ್ಲಿ ತೀರ್ಮಾನ ಮಾಡಿಲ್ಲ. ನಮ್ಮ ಮೇಲಿನ ಅಭಿಮಾನದಿಂದ ಕೆಲವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎಂದು ಹೇಳುತ್ತಿದ್ದಾರೆ. ನಮ್ಮ ಪಕ್ಷ ಮತ್ತು ಬಿಜೆಪಿಯಲ್ಲಿ ಕೆಲವರು ಅಭಿಪ್ರಾಯ ತಿಳಿಸುತ್ತಿದ್ದಾರೆ. ನಾನು ಮಂತ್ರಿಯಾದರೆ ರಾಜ್ಯಕ್ಕೆ ಆದ್ಯತೆ ಸಿಗಬಹುದು ಎಂಬುದು ಅವರ ಅಭಿಪ್ರಾಯವಾಗಿದೆ ಎಂದು ಹೇಳಿದರು.