ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ಹಗರಣಗಳಲ್ಲಿ ಕ್ಲೀನ್ ಚಿಟ್ ಪಡೆಯಲು ಎಸ್‌ಐಟಿ, ಸಿಐಡಿಯನ್ನು ನೇಮಿಸುತ್ತದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇ.ಡಿ. ಬರದೆ ಇದ್ದಲ್ಲಿ ವಾಲ್ಮೀಕಿ ನಿಗಮದ ಹಗರಣ ಮುಚ್ಚಿ ಹೋಗುತ್ತಿತ್ತು. ಸಿಬಿಐಗೆ ಹೋದಾಗ, ಅದರಲ್ಲಿ ಹಣಕಾಸು ಅವ್ಯವಹಾರ (ಮನಿ ಲಾಂಡರಿಂಗ್) ಇದೆ ಎಂದು ಗೊತ್ತಾದಾಗ ಇ.ಡಿ. ತನಿಖೆ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದರು.
೧೮೭ ಕೋಟಿ ಅವ್ಯವಹಾರ ನಡೆದುದು ನಿಜ; ಆದರೆ, ಕೇವಲ ೮೭ ಕೋಟಿ ಅವ್ಯವಹಾರ ಆಗಿದೆ ಎಂದು ಮುಖ್ಯಮಂತ್ರಿಯವರು ಅವತ್ತೇ ಹೇಳಿದ್ದರು. ಸತ್ಯ ಒಪ್ಪಿಕೊಂಡ ಮೇಲೆ ಕ್ರಮ ಆಗಿರಲಿಲ್ಲ. ಕದ್ದ ಮಾಲು ವಾಪಸ್ ಕೊಟ್ಟರೆ ಕೇಸ್ ಖುಲಾಸೆ ಆಗುತ್ತದೆಯೇ ಎಂದು ಪ್ರಶ್ನಿಸಿದರು. ಇದರಲ್ಲಿ ೨೦ ಕೋಟಿ ಹಣವನ್ನು ತುಕಾರಾಂ ಅವರ ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಸಿದ್ದಾರೆ. ನಾಗೇಂದ್ರರ ವೈಯಕ್ತಿಕ ವೆಚ್ಚವಾಗಿ ಹಣ ಖರ್ಚಾದುದರ ಕುರಿತು ಇ.ಡಿ. ವರದಿಯಲ್ಲಿ ಉಲ್ಲೇಖವಿದೆ ಎಂದು ತಿಳಿಸಿದರು.