ರಾಜಕೀಯ ಪಿತೂರಿಯಿಂದಾಗಿ ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ : ಶಾಹಿದ ತಸ್ನೀಮ್
ರಾಜಕೀಯ ಪಿತೂರಿಯ ಭಾಗವಾಗಿ ಕಾನೂನುಗಳನ್ನು ದುರ್ಬಳಕೆ ಮಾಡಿ ಅಮಾಯಕರನ್ನು ವಿಚಾರಣೆ ಇಲ್ಲದೆ ವರ್ಷಗಟ್ಟಲೆ ಜೈಲಲ್ಲಿ ಕೊಳೆಸುತ್ತಿರುವುದು ಮತ್ತು ಕೊನೆಗೆ ಸಾಕ್ಷ್ಯಧಾರಗಳೇ ಇಲ್ಲದೇ ಬಿಡುಗಡೆಯಾಗುತ್ತಿರುವುದು ಮಾನವ ಹಕ್ಕಿನ ಉಲ್ಲಂಘನೆಯಾಗಿದೆ. ಕರಾಳ ಕಾನೂನುಗಳನ್ನು ತಮ್ಮ ಸ್ವಚ್ಛಾಚಾರಕ್ಕೆ ದುರ್ಬಳಕೆ ಮಾಡಿದ ಅಧಿಕಾರಿಗಳನ್ನು ಉತ್ತರದಾಯಿಗಳನ್ನಾಗಿಸಬೇಕು ಮತ್ತು ಮುಗ್ಧರಿಗೆ ಪರಿಹಾರ ಒದಗಿಸಬೇಕು. ಅತಿ ಹೆಚ್ಚು ದುರ್ಬಳಕೆಗೀಡಾಗುತ್ತಿರುವ ಇಂತಹ ಕರಾಳ ಕಾನೂನುಗಳನ್ನು ತಕ್ಷಣ ಹಿಂಪಡೆಯಬೇಕು. ಇದಕ್ಕಾಗಿ ಜನಾಂದೋಲನ ರೂಪಿಸಲು ಇಂದಿನ ವಿಶ್ವ ಮಾನವ ಹಕ್ಕುಗಳ ದಿನ ಪ್ರೇರಣೆಯಾಗಲಿ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಾಹಿದ ತಸ್ನೀಮ್ ಅಭಿಪ್ರಾಯಪಟ್ಟರು.
ವಿಶ್ವ ಮಾನವ ಹಕ್ಕುಗಳ ದಿನಾಚರಣೆಯ ಅಂಗವಾಗಿ ವಿಮೆನ್ ಇಂಡಿಯಾ ಮೂವ್ಮೆಂಟ್ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಬಿಸಿರೋಡ್ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾಧ್ಯಕ್ಷೆ ಶಿನೀರ ಮಾತನಾಡಿ, ಧಿರುಸಿನ ಹಕ್ಕನ್ನು ಕಸಿಯುವ ಮುಖಾಂತರ ಇಲ್ಲಿನ ಸರಕಾರ ಶಿಕ್ಷಣದ ಹಕ್ಕನ್ನು ಕಸಿಯುತ್ತಿರುವುದು ಮಾನವ ಹಕ್ಕುಗಳ ಉಲ್ಲಂಘನೆ ಯಾಗಿರುತ್ತದೆ. ಇಂತಹ ಸರಕಾರಿ ಸ್ವಾಮ್ಯದ ಉಲ್ಲಂಘನೆಯನ್ನು ಎದುರಿಸಲು ನಾವು ಜನಜಾಗೃತಿ ಮೂಡಿಸಬೇಕಾಗಿದೆ ಎಂದರು. ಜಿಲ್ಲಾ ಉಪಾಧ್ಯಕ್ಷೆ ಝಹಿದ ಸಾಗರ್, ಜಿಲ್ಲಾ ಕಾರ್ಯದರ್ಶಿ ಝೈನಬ, ಕೋಶಧಿಕಾರಿ ಫಾಹಿನ ಉಪಸ್ಥಿತರಿದ್ದರು.
ವಿಮ್ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಝುಬೈದಾ ಬಂಟ್ವಾಳ ಸ್ವಾಗತಿಸಿದರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝಹನ ಬಂಟ್ವಾಳ ಧನ್ಯವಾದ ಅರ್ಪಿಸಿದರು. ಜಿಲ್ಲಾ ಸಮಿತಿ ಸದಸ್ಯೆ ಝೈಬುನ್ನಿಸ ಕಾರ್ಯಕ್ರಮ ನಿರೂಪಿಸಿದರು.



