Wednesday, December 24, 2025
Google search engine

Homeಬ್ರೇಕಿಂಗ್ ನ್ಯೂಸ್ಉದ್ಯೋಗಭಾರತ-ನ್ಯೂಜಿಲೆಂಡ್‌ ಮುಕ್ತ ವ್ಯಾಪಾರ ಒಪ್ಪಂದಕ್ಕೆ ವಿನ್‌ಸ್ಟನ್ ಪೀಟರ್ಸ್ ವಿರೋಧ!

ಭಾರತ-ನ್ಯೂಜಿಲೆಂಡ್‌ ಮುಕ್ತ ವ್ಯಾಪಾರ ಒಪ್ಪಂದಕ್ಕೆ ವಿನ್‌ಸ್ಟನ್ ಪೀಟರ್ಸ್ ವಿರೋಧ!

ವೆಲ್ಲಿಂಗ್ಟನ್‌: ನ್ಯೂಜಿಲೆಂಡ್‌ನ ವಿದೇಶಾಂಗ ಸಚಿವ ವಿನ್‌ಸ್ಟನ್ ಪೀಟರ್ಸ್ ಅವರು, ಹೊಸದಾಗಿ ಘೋಷಿಸಲಾದ ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದವನ್ನು ತೀವ್ರವಾಗಿ ಟೀಕಿಸಿದ್ದಾರೆ. ಇದನ್ನು ನ್ಯಾಯಯುತವಲ್ಲದ ಒಪ್ಪಂದ ಎಂದು ಕರೆದಿರುವ ಪೀಟರ್ಸ್‌, ಈ ಒಪ್ಪಂದ ಸಂಸತ್ತಿನಲ್ಲಿ ಚರ್ಚೆಗೆ ಬಂದಾಗ, ತಮ್ಮ ಪಕ್ಷ ನ್ಯೂಜಿಲೆಂಡ್‌ ಫಸ್ಟ್‌ ತೀವ್ರವಾಗಿ ವಿರೋಧಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ತಮ್ಮ ಎಕ್ಸ್‌ ಅಕೌಂಟ್‌ನಲ್ಲಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ವಿನ್‌ಸ್ಟನ್ ಪೀಟರ್ಸ್, “ನಮ್ಮ ಪಕ್ಷ ಭಾರತ-ನ್ಯೂಜಿಲೆಂಡ್‌ ವ್ಯಾಪಾರ ಒಪ್ಪಂದವನ್ನು ವಿರೋಧಿಸುತ್ತದೆ. ಏಕೆಂದರೆ ಇದು ದೇಶದಲ್ಲಿ ವಲಸೆ ಬಿಕ್ಕಟ್ಟನ್ನು ಸೃಷ್ಟಿ ಮಾಡಲಿದೆ. ಅಲ್ಲದೇ ನಿರ್ಣಾಯಕ ಡೈರಿ ವಲಯದಲ್ಲಿ ಇದು ನ್ಯೂಜಿಲೆಂಡ್‌ಗೆ ಭಾರೀ ಹೊಡೆತ ನೀಡಲಿದೆ”. ದುರದೃಷ್ಟವಶಾತ್, ಇದು ನ್ಯೂಜಿಲೆಂಡ್‌ ಪಾಲಿಗೆ ಕೆಟ್ಟ ಒಪ್ಪಂದವಾಗಿದೆ. ನ್ಯೂಜಿಲೆಂಡ್ ತನ್ನ ಮಾರುಕಟ್ಟೆಯನ್ನು ಭಾರತೀಯ ಉತ್ಪನ್ನಗಳಿಗೆ ಸಂಪೂರ್ಣವಾಗಿ ತೆರೆಯುತ್ತದೆಯಾದರೂ, ನಮ್ಮ ಪ್ರಮುಖ ಡೈರಿ ರಫ್ತಿನ ಮೇಲಿನ ಗಮನಾರ್ಹ ಸುಂಕದ ಅಡೆತಡೆಗಳನ್ನು ಕಡಿಮೆ ಮಾಡಲು ಭಾರತ ಒಪ್ಪಿಕೊಳ್ಳದಿರುವುದು ದುರಂತ. ಈ ಒಪ್ಪಂದದಿಂದ ನಮ್ಮ ರೈತ ಸಮುದಾಯದ ಹಿತಾಸಕ್ತಿಯನ್ನು ರಕ್ಷಿಸುವುದು ಅಸಾಧ್ಯ ಎಂದು ವಿನ್‌ಸ್ಟನ್‌ ಪೀಟರ್ಸ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವ್ಯಾಪಾರ ಒಪ್ಪಂದವನ್ನು ಜಾರಿಗೊಳಿಸುವಲ್ಲಿ ಆತುರ ತೋರದಂತೆ ತನ್ನ ಪಾಲುದಾರ ಪಕ್ಷ ನ್ಯಾಷನಲ್‌ ಪಾರ್ಟಿಯನ್ನು ಒತ್ತಾಯಿಸಿರುವ ನ್ಯೂಜಿಲೆಂಡ್‌ ಫಸ್ಟ್‌ ಪಕ್ಷ, ಉತ್ತಮ ಫಲಿತಾಂಶ ಪಡೆಯಲು ಸಂಸತ್ತಿನ ಅವಧಿಯನ್ನು ಬಳಸುವಂತೆ ಸಲಹೆ ನೀಡಿದೆ. ಈ ಒಪ್ಪಂದ ಸಂಸತ್ತಿನ ಬಹುಮತ ಪಡೆದರೆ ಅದು ನಾವು ನ್ಯೂಜಿಲೆಂಡ್‌ ರೈತರಿಗೆ ಮಾಡುವ ದ್ರೋಹ ಎಂದು ವಿನ್‌ಸ್ಟನ್‌ ಪೀಟರ್ಸ್‌ ಕಿಡಿಕಾರಿದ್ದಾರೆ.

ವ್ಯಾಪಾರದ ಆಚೆಗೆ, ವಿನ್‌ಸ್ಟನ್‌ ಪೀಟರ್ಸ್ ಅವರು ಒಪ್ಪಂದದಿಂದ ಎದುರಾಗುವ ದೂರಗಾಮಿ ವಲಸೆ ಬಿಕ್ಕಟ್ಟಿನ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದು, ನಿರ್ದಿಷ್ಟವಾಗಿ ಭಾರತೀಯ ನಾಗರಿಕರಿಗೆ ಹೊಸ ಉದ್ಯೋಗ ವೀಸಾವನ್ನು ರಚಿಸುವುದು, ದೇಶದಲ್ಲಿ ವಲಸೆ ಬಿಕ್ಕಟ್ಟನ್ನು ಸೃಷ್ಟಿಸಲಿದೆ ಎಂದು ಪೀಟರ್ಸ್‌ ಎಚ್ಚರಿಸಿದ್ದು, ಭಾರತ-ಯುಕೆ ಟ್ರೇಡ್‌ ಡೀಲ್ ಮತ್ತು ಭಾರತ-ಆಸ್ಟ್ರೇಲಿಯಾ ವ್ಯಾಪಾರ ಒಪ್ಪಂದದಲ್ಲಿ ಉಲ್ಲೇಖಿಸಿದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ, ಭಾರತ-ನ್ಯೂಜಿಲೆಂಡ್‌ ವ್ಯಾಪಾರ ಒಪ್ಪಂದದಡಿ ಭಾರತೀಯ ಕಾರ್ಮಿಕರು ದೇಶಕ್ಕೆ ಬರಲಿದ್ದಾರೆ. ಇದು ಭವಿಷ್ಯದಲ್ಲಿ ನ್ಯೂಜಿಲೆಂಡ್‌ನಲ್ಲಿ ವಲಸೆ ಬಿಕ್ಕಟ್ಟನ್ನು ಸೃಷ್ಟಿಸಲಿದೆ ಎಂದು ವಿನ್‌ಸ್ಟನ್‌ ಪೀಟರ್ಸ್‌ ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಿನಲ್ಲಿ ಭಾರತ-ನ್ಯೂಜಿಲೆಂಡ್‌ ಮುಕ್ತ ವ್ಯಾಪಾರ ಒಪ್ಪಂದವನ್ನು ಅಲ್ಲಿನ ವಿದೇಶಾಂಗ ಸಚಿವರೇ ಖಂಡಿಸಿದ್ದು, ಈ ಕುರಿತು ನ್ಯೂಜಿಲೆಂಡ್‌ ಸಂಸತ್ತಿನಲ್ಲಿ ಏನೆಲ್ಲಾ ಚರ್ಚೆಗಳು ನಡೆಯಲಿವೆ ಎಂಬುದನ್ನು ಕಾದುನೋಡಬೇಕಿದೆ.

RELATED ARTICLES
- Advertisment -
Google search engine

Most Popular