ಮೈಸೂರು: ಪ್ರಸ್ತುತ ನಮ್ಮ ಸರ್ಕಾರಗಳು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡುತ್ತಿಲ್ಲ. ಸಂಶೋಧನೆಗಳು ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿಲ್ಲ. ಇದರಿಂದ ದೇಶದ ಅಭಿವೃದ್ಧಿಗೆ ಕೊಡಲಿ ಪೆಟ್ಟು ಬೀಳಲಿದೆ ಎಂದು ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ತಿಳಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿವಿ ವಾಣಿಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿರುವ ಎಪ್‌ಸಿಎಸ್‌ಎಸ್ ಮತ್ತು ಅಮೋಸ್ ಬಳಸಿಕೊಂಡು ಡೇಟಾ ವಿಶ್ಲೇಷಣೆ ಕುರಿತು ೫ ದಿನಗಳ ರಾಷ್ಟ್ರೀಯ ಮಟ್ಟದ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಅಭಿವೃದ್ಧಿ ಶಿಕ್ಷಣದಿಂದ ಆಗಬೇಕು. ಹೀಗಾಗಿ, ಉನ್ನತ ಶಿಕ್ಷಣಕ್ಕೆ ಮೂಲಭೂತ ಸೌಲಭ್ಯ, ಅನುದಾನ, ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕು. ಇಲ್ಲವೇ ಉನ್ನತ ಶಿಕ್ಷಣ ಹಾಗೂ ಸಂಶೋಧನೆಯಲ್ಲಿ ಸದಾ ಹಿಂದುಳಿಯುತ್ತಿರುವ ದೇಶಗಳ ಪಟ್ಟಿಯಲ್ಲಿ ನಮ್ಮ ದೇಶವು ಸಹ ಹೆಜ್ಜೆ ಇರಿಸಬೇಕಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಯಾವುದೇ ದೇಶ, ರಾಜ್ಯದ ಅಭಿವೃದ್ಧಿಗೆ ಉನ್ನತ ಶಿಕ್ಷಣದ ಜತೆಗೆ ಸಂಶೋಧನೆ ಅತ್ಯಗತ್ಯ. ಇದಕ್ಕೆ ಪೂರಕವಾಗಿ ಮೂಲಭೂತ ಸೌಲಭ್ಯ, ಅನುದಾನ, ಪ್ರಯೋಗಾಲಯಗಳು ಅಗತ್ಯ. ಕೊರೊನಾ ನಂತರ ಶೈಕ್ಷಣಿಕ ಕ್ಷೇತ್ರ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಶಿಕ್ಷಣ ಮೂಲ ಆಧಾರಿತ ಸಂಶೋಧನೆಗಳ ಮೂಲಕ ಮುಂದಿನ ಪೀಳಿಗೆಗೆ ಅತ್ಯಮೂಲ್ಯ ಕೊಡುಗೆಗಳನ್ನು ನಾವು ನೀಡಬೇಕಿದೆ. ದೇಶದ ಉನ್ನತ ಶಿಕ್ಷಣ, ಪಾಶ್ಚಿಮಾತ್ಯ ಶಿಕ್ಷಣದ ಬಗ್ಗೆ ಯೋಚಿಸಬೇಕಿದೆ ಎಂದರು.
ವಿದೇಶಗಳಲ್ಲಿರುವ ವಿeನಿಗಳು, ತಂತ್ರಜ್ಞರು, ರಾಜಕೀಯ ಕ್ಷೇತ್ರಗಳಲ್ಲಿ ಭಾರತೀಯರ ಹೆಸರು ಪ್ರಜ್ವಲಿಸುತ್ತಿದೆ. ನಾವು ಈಗ ಹೊಸದಾಗಿ ವಿಶ್ವಗುರು ಆಗಬೇಕಿಲ್ಲ. ಬಹಳ ಹಿಂದಿನಿಂದಲೂ ವಿಶ್ವಕ್ಕೆ ಭಾರತ ಗುರುವಾಗಿದೆ. ಪುರಾತನ ಕಾಲದಿಂದಲೂ ಮೌಲ್ಯಾಧಾರಿತ ಶಿಕ್ಷಣ ನೀಡಲಾಗುತ್ತಿದೆ. ಮಹಾಭಾರತ, ರಾಮಾಯಣ ಗ್ರಂಥಗಳು, ನಮ್ಮ ಬಹುತ್ವ ಸಂಸ್ಕೃತಿಯ ಬಗ್ಗೆ ವಿದೇಶಿಯರು ಈಗಲೂ ಅಧ್ಯಯನ ಮಾಡಲು ಬರುತ್ತಿದ್ದಾರೆ. ಗುರುಕುಲದಿಂದ ಆಧುನಿಕ ಶಿಕ್ಷಣದವರೆಗೆ ತನ್ನ ಪ್ರಾಮುಖ್ಯತೆಯನ್ನು ಭಾರತ ಕಳೆದುಕೊಂಡಿಲ್ಲ ಎಂದು ಹೇಳಿದರು.
ಅಧ್ಯಾಪಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಜತೆಗೆ ಸಂಶೋಧನೆಗೆ ಪ್ರೇರೇಪಿಸಬೇಕು. ಅಂತಹ ವಿದ್ಯಾರ್ಥಿಗಳು ವಿದೇಶಗಳಿಗೆ ತೆರಳದೆ ಇಲ್ಲೇ ಸಂಶೋಧನೆ ನಡೆಸಿ, ಸೇವೆ ಸಲ್ಲಿಸುವ ಮೂಲಕ ದೇಶಕ್ಕೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಚಾಣಕ್ಯ ವಿವಿ ವಾಣಿಜ್ಯ ಮತ್ತು ನಿರ್ವಹಣಾ ಶಾಲೆಯ ಡೀನ್ ಪ್ರೊ.ವಿ.ರಾಜೇಶ್‌ಕುಮಾರ್, ರಾಜ್ಯ ಮುಕ್ತ ವಿವಿ ಕುಲಸಚಿವ ಪ್ರೊ.ಕೆ.ಎಲ್.ಎನ್. ಮೂರ್ತಿ, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ, ಡೀನ್‌ಗಳಾದ ಪ್ರೊ.ಎನ್.ಲಕ್ಷ್ಮೀ, ಪ್ರೊ.ಎಂ.ರಾಮನಾಥನ್ ನಾಯ್ಡು, ಹಣಕಾಸು ಅಧಿಕಾರಿ ಡಾ.ಖಾದರ್ ಪಾಷ ಇದ್ದರು.