Saturday, April 19, 2025
Google search engine

Homeಸ್ಥಳೀಯವಿಜ್ಞಾನವಿಲ್ಲದೆ ಸಂಶೋಧನೆ, ಆವಿಷ್ಕಾರ ಸಾಧ್ಯವಿಲ್ಲ

ವಿಜ್ಞಾನವಿಲ್ಲದೆ ಸಂಶೋಧನೆ, ಆವಿಷ್ಕಾರ ಸಾಧ್ಯವಿಲ್ಲ


ಮೈಸೂರು: ವಿಜ್ಞಾನವಿಲ್ಲದೆ ಯಾವ ನೂತನ ಅವಿಷ್ಕಾರಗಳು, ಸಂಶೋಧನೆಗಳು ಸಾಧ್ಯವಿಲ್ಲ. ದೇಶದ ಅಭಿವೃದ್ಧಿಯಲ್ಲಿ ಮತ್ತು ಮಾನವನ ಸರ್ವತೋಮುಖ ಬೆಳವಣಿಗೆಯಲ್ಲಿ ವಿಜ್ಞಾನದ ಪಾತ್ರ ಅಪಾರ ಎಂದು ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಸದಾಶಿವೇಗೌಡ ಅಭಿಪ್ರಾಯಪಟ್ಟರು.
ವಿಜಯ ವಿಠಲ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವೇದಿಕೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ವಿಜ್ಞಾನದಲ್ಲಿ ಸತತ ಅಧ್ಯಯನಶೀಲರಾಗಬೇಕೆಂದು ಕರೆ ನೀಡಿದರು.
ಸನ್ನಡತೆ, ಕೌಶಲ್ಯ ಮತ್ತು ಸುಜ್ಞಾನ ಪ್ರತಿಯೊಬ್ಬ ಮನುಷ್ಯನ ಯಶಸ್ಸಿನ ರಹದಾರಿಗೆ ಇರುವ ಪ್ರಮುಖ ಅಂಶಗಳು. ಸ್ವಾಮಿ ವಿವೇಕಾನಂದ, ಸರ್.ಎಂ.ವಿಶ್ವೇಶ್ವರಯ್ಯ ಮುಂತಾದ ಮಹನೀಯರ ಜೀವನ ಮೌಲ್ಯಗಳು ನಮಗೆ ಆದರ್ಶವಾಗಿರಬೇಕು. ಜೀವನದಲ್ಲಿ ಪರಿಶ್ರಮ, ಸರಿಯಾದ ಯೋಚನೆ ಹಾಗೂ ನಿಖರ ಯೋಜನೆ ಇದ್ದಾಗ ಉದ್ದೇಶಿತ ಗುರಿ ತಲುಪಬಹುದು. ಶಿಕ್ಷಣ ವ್ಯವಸ್ಥೆ ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲಿ ಮೌಲ್ಯಗಳನ್ನು ಹುಟ್ಟು ಹಾಕಬೇಕು. ತರಗತಿಗಳಲ್ಲಿ ಶ್ರದ್ಧೆಯಿಂದ ಪಾಠ ಕೇಳುವುದು, ಸಂವಹನ ಹಾಗೂ ನಾಯಕತ್ವ ಕೌಶಲ್ಯಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಂಡು ಸಕಾರಾತ್ಮಕ ಚಿಂತನೆಯಿಂದ ಇರಬೇಕು ಎಂದು ಹೇಳಿದರು.
ವಿಜಯ ವಿಠಲ ವಿದ್ಯಾಸಂಸ್ಥೆಗಳ ಗೌರವ ಕಾರ್ಯದರ್ಶಿ ವಾಸುದೇವ ಭಟ್ ಮಾತನಾಡಿ, ಯಶಸ್ಸನ್ನು ಕಾಣಲು ಹಲವಾರು ಯಶಸ್ವಿ ಮಹಾಪುರುಷರ ಜೀವನ ಮೌಲ್ಯವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಪುಸ್ತಕದ ಜ್ಞಾನದ ಜತೆಗೆ ಪ್ರಾಮಾಣಿಕರಾಗಿದ್ದು ಸಮಾಜಕ್ಕೆ, ದೇಶಕ್ಕೆ ಉಪಕಾರಿಯಾಗುವ ವ್ಯಕ್ತಿಯಾಗುವಂತೆ ವಿದ್ಯಾರ್ಥಿಗಳು ವಿಕಸನ ಹೊಂದಬೇಕು. ವಿದ್ಯಾರ್ಥಿ ಜೀವನದಲ್ಲಿ ಬರುವ ಸಮಸ್ಯೆಗಳಿಂದ ವಿಚಲಿತರಾಗದೆ ದೊರಕುವ ವಿಫುಲ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.
ವಿಜ್ಞಾನ ಸಂಘದ ಸಂಚಾಲಕಿ ಮೇಧಾ.ಎಂ.ಡಿ ವಿಜ್ಞಾನ ಸಂಘದ ಧ್ಯೇಯೋದ್ದೇಶಗಳನ್ನು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಹೆಚ್.ಸತ್ಯಪ್ರಸಾದ್, ಉಪನ್ಯಾಸಕರಾದ ರಾಜೇಶ್.ಇ, ಕಾಂತರಾಜು, ಮಯೂರಲಕ್ಷ್ಮಿ, ಅನಿತಾ, ಜಯಗಿರಿಜಾ, ಮಂಜುನಾಥ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular