ಗುಂಡ್ಲುಪೇಟೆ: ಮಹಿಳೆಯರು ನಾಯಕತ್ವ ಗುಣ ಬೆಳೆಸಿಕೊಳ್ಳುವ ಜೊತೆಗೆ ಸುತ್ತಮುತ್ತಲಿನ ಮಹಿಳೆ ಪರವಾಗಿ ಧ್ವನಿ ಎತ್ತಬೇಕು ಎಂದು ಸಂಪನ್ಮೂಲ ವ್ಯಕ್ತಿ ಸಿಸ್ಟರ್ ಎಡ್ವಿನ್ ಸಾವಲ್ಡನ್ ಸಲಹೆ ನೀಡಿದರು.
ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಕೈಲಾಶ್ ಸತ್ಯಾರ್ಥಿ ಚಿಲ್ಡ್ರನ್ಸ್ ಫೌಂಡೇಶನ್ ವತಿಯಿಂದ ಮಹಿಯರಿಗೆ ನಡೆದ ಮಹಿಳಾ ನಾಯಕತ್ವ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆಯರಿಗೆ ನಾಯಕತ್ವ ಎನ್ನುವುದು ಮನೆಯಿಂದ ಪ್ರಾರಂಭವಾಗಿ ಪಡೆದ ಅವರು ಶಿಕ್ಷಣ ಮತ್ತು ಜೀವನದಲ್ಲಿ ಆಗುವ ಘಟನೆಗಳಿಂದ ಬರುತ್ತದೆ. ಇದರಿಂದ ನಾಯಕಿಯಾಗುವ ಛಲ ಮೂಡುತ್ತದೆ. ಆದ್ದರಿಂದ ನಿಮ್ಮಲ್ಲಿ ನಾಯಕತ್ವ ಗುಣ ಬೆಳೆಯುವುದರ ಜೊತೆ ಸುತ್ತಮುತ್ತಲಿನ ಮಹಿಳೆಯರಿಗೂ ಧೈರ್ಯ ತುಂಬಿ ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಸಿಎಸ್ ಡಬ್ಲ್ಯೂ ಜ್ಯೋತಿ ಮಾತನಾಡಿ, ಇಂದು ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರದಲ್ಲೂ ಕಾರ್ಯ ವೈಖರಿಯನ್ನು ವಿಸ್ತರಣೆ ಮಾಡಿಕೊಂಡು ಬರುತ್ತಿದ್ದಾರೆ. ಪ್ರಸ್ತುತ ಹೆಣ್ಣು ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ ಎಂಬಂತೆ ತಮ್ಮ ಸಾಮರ್ಥ್ಯ ತೋರುವುದು ಖುಷಿ ವಿಚಾರ. ಮಹಿಳೆಯರು ಯಾವುದೇ ಸಂದರ್ಭದಲ್ಲೂ ಹಿಂಜರಿಕೆ ಇಲ್ಲದೆ ಮುನ್ನುಗ್ಗುವ ಮನಸ್ಥಿತಿ ಬೆಳೆದಾಗ ಮಾತ್ರ ನಾಯಕರಾಗಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಜೆಕ್ಟ್ ಆಫೀಸರ್ ಚಂದ್ರಮ್ಮ, ಸಿಎಸ್ ಡಬ್ಲ್ಯೂಗಳಾದ ನಾಗಮ್ಮ, ಭಾಗ್ಯ, ಪವಿತ್ರ, ಅನಿತಾ, ಮಹೇಶ್ ಸೇರದಂತೆ ಹಲವು ಮಂದಿ ಮಹಿಳೆಯರು ಹಾಜರಿದ್ದರು.