ಮೈಸೂರು : ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಹಿಳೆಯರಿಗೆ ಹೆಚ್ಚಿನ ಪ್ರೋತ್ಸಾಹ ನೀಡುತಿರುವುದರಿಂದ ಮಹಿಳೆಯರು ಸಮಾಜದಲ್ಲಿ ಮಾದರಿಯಾಗಿರಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಕರೆ ನೀಡಿದರು.
ನಗರದ ಜಗನ್ಮೋಹನ ಅರಮನೆಯಲ್ಲಿ ಶ್ರೀರಾಂಪುರದ ನವೋದಯ ಚಾರಿಟೇಬಲ್ ಸೊಸೈಟಿ ವತಿಯಿಂದ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಮಾಜದಲ್ಲಿ ಸಮಾನತೆ ಬರಬೇಕಾದರೆ ಹೆಣ್ಣು ಮಕ್ಕಳಿಗೆ ಸಮಾನ ಪ್ರಾಶಸ್ತ್ಯ ನೀಡಬೇಕು. ಹೆಣ್ಣು ಮಕ್ಕಳು ಎಲ್ಲಾ ರಂಗಗಳಲ್ಲಿಯೂ ಇಂದು ಕೆಲಸ ಮಾಡುತ್ತಿದ್ದಾರೆ. ಆದರೆ ಕಡಿಮೆ ಪ್ರಮಾಣದಲ್ಲಿದ್ದಾರೆ.
ಸರ್ಕಾರ ರಾಜಕೀಯ, ಸರ್ಕಾರಿ ಕೆಲಸ ಎಲ್ಲದರಲ್ಲೂ ಶೇ. ೫೦% ಮೀಸಲಾತಿಯನ್ನು ಏಕೆ ಕೊಡಬಾರದು. ಬದುಕಿನ ಎಲ್ಲಾ ಸವಾಲುಗಳನ್ನು ಎದುರಿಸುತ್ತಾ, ನೋವುಗಳನ್ನು ನುಂಗಿಕೊಂಡು ಗಂಡ ಮಕ್ಕಳಿಗೋಸ್ಕರ ತನ್ನ ಜೀವನವನ್ನೇ ತ್ಯಾಗ ಮಾಡುವ ಮಹಾತಾಯಿ ಹೆಣ್ಣು ಆ ಹೆಣ್ಣನ್ನು ಪ್ರತಿಯೊಬ್ಬರು ಗೌರವಿಸಬೇಕು. ಹೆಣ್ಣು ಮಗಳಾಗಿ, ಪತ್ನಿಯಾಗಿ, ಪತ್ನಿಯಾಗಿ, ತಂಗಿಯಾಗಿ, ತಾಯಿಯಾಗಿ, ಸ್ನೇಹಿತೆಯಾಗಿ ಎಲ್ಲಾ ಸ್ಥಾನಗಳನ್ನು ತುಂಬುವ ಏಕೈಕ ಶಕ್ತಿ ಮಹಿಳೆಯರಿಗಿದೆ. ಆದ್ದರಿಂದ ಹೆಣ್ಣು ತ್ಯಾಗಮಯಿಯಾಗಿದ್ದಾರೆ. ಭೂ ತಾಯಿ ಹೆಣ್ಣು, ಭುವನೇಶ್ವರಿ ಹೆಣ್ಣು, ಭಾರತಾಂಬೆ ಹೆಣ್ಣು, ನಮ್ಮನ್ನು ಹಡೆದ ತಾಯಿ ಹೆಣ್ಣು, ಹೆಣ್ಣಿಲ್ಲದಿದ್ದರೆ ಈ ಜಗತ್ತೇ ಶೂನ್ಯವಾಗುತ್ತದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಣ್ಣನ್ನು ಎದುರು ಹಾಕಿಕೊಂಡು ಸರ್ಕಾರ ನಡೆಸಲು ಸಾಧ್ಯವಿಲ್ಲದ್ದರಿಂದ ಹೆಣ್ಣಿಗೆ ಹೆಚ್ಚಿನ ಮಹತ್ವವನ್ನು ಕೊಡುತ್ತಿದ್ದಾರೆ.
ಸರ್ಕಾರದ ಎಲ್ಲಾ ಯೋಜನೆ ಸವಲತ್ತುಗಳನ್ನು ಉಪಯೋಗಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು, ಒಗ್ಗಟ್ಟಿನಲ್ಲಿ ಬಲವಿದೆ ಎಲ್ಲರು ಸಂಘಟಿತರಾಗಿ ನಿಮ್ಮ ಹಕ್ಕುಗಳನ್ನು ಪಡೆಯಿರಿ ಹೊರದೇಶದ ಮಹಿಳೆಯರು ಭಾರತದ ಮಹಿಳೆಯರ ಸಂಸ್ಕೃತಿಯನ್ನು ಅನುಸರಿಸುತ್ತಿದ್ದಾರೆ. ನಿಮ್ಮ ಮಕ್ಕಳಿಗೆ ಶಿಕ್ಷಣ ನೀಡಿ, ಹೊಡೆಯಬೇಡಿ, ಬೇರೆ ಮಕ್ಕಳೊಂದಿಗೆ ನಿಮ್ಮ ಮಕ್ಕಳನ್ನು ಹೋಲಿಕೆ ಮಾಡಬೇಡಿ ಎಂದ ಅವರು ಎಲ್ಲರಿಗೂ ಶುಭಾಶಯ ಕೋರಿದರು. ಸಮಾರಂಭದಲ್ಲಿ ಸಿಸ್ಟರ್ ಜ್ಯೋತಿ, ಸ್ವಾಮಿ, ದೇವಸ್ಸಿ ಕಾಡ ಪರಂಬಿಳ್, ಉಷಾದೇವಿ, ಶೈನಿ ಮಂಗರಿಲ್, ವೀಣಾ ವಿಲಿಯಂ, ಫಾದರ್ ಜಾನ್ ಫೀಟರ್, ಶೋಭಾ, ದಿನೇಶ್‌ಗೌಡ ಹಾಜರಿದ್ದರು.