Saturday, April 19, 2025
Google search engine

Homeಸ್ಥಳೀಯಮಹಿಳಾ ಹಾಕಿ: ಟೆರೇಷಿಯನ್ ಕಾಲೇಜು ಚಾಂಪಿಯನ್

ಮಹಿಳಾ ಹಾಕಿ: ಟೆರೇಷಿಯನ್ ಕಾಲೇಜು ಚಾಂಪಿಯನ್


ಮೈಸೂರು: ಉತ್ತಮ ಪ್ರದರ್ಶನ ನೀಡಿದ ನಗರದ ಟೆರೇಷಿಯನ್ ಕಾಲೇಜು ತಂಡ ಮೈಸೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಅಂತರ ವಲಯ ಮಹಿಳಾ ಹಾಕಿ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿತು.
ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗ, ಹುಣಸೂರು ಸರ್ಕಾರಿ ಮಹಿಳಾ ಕಾಲೇಜು ವತಿಯಿಂದ ಸ್ಪೋರ್ಟ್ಸ್ ಪೆವಿಲಿಯನ್ ಹಾಕಿ ಮೈದಾನದಲ್ಲಿ ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಎಸ್‌ಬಿಆರ್‌ಆರ್ ಮಹಾಜನ ಕಾಲೇಜು ತಂಡದ ವಿರುದ್ಧ ೩-೦ ಗೋಲುಗಳಿಂದ ಜಯ ಸಾಧಿಸಿತು. ಅಂತಿಮ ಪಂದ್ಯದಲ್ಲಿ ಸೋತ ಮಹಾಜನ ಕಾಲೇಜು ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿತು.
ಮೂರು ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ನಾಗಮಂಗಲದ ಬಿಜಿಎಸ್ ಕಾಲೇಜು ತಂಡ ೩-೦ ಗೋಲುಗಳಿಂದ ಮೈಸೂರಿನ ಸರಸ್ವತಿಪುರಂನ ಜೆಎಸ್‌ಎಸ್ ಕಾಲೇಜು ವಿರುದ್ಧ ಜಯ ಸಾಧಿಸಿತು. ಇದಕ್ಕೂ ಮುನ್ನ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಟೆರೇಷಿಯನ್ ಕಾಲೇಜು ತಂಡ ೫-೦ ಗೋಲುಗಳಿಂದ ಜೆಎಸ್‌ಎಸ್ ಕಾಲೇಜು ವಿರುದ್ಧ ಹಾಗೂ ಎಸ್‌ಬಿಆರ್‌ಆರ್ ಮಹಾಜನ ಕಾಲೇಜು ತಂಡ ೩-೨ ಗೋಲುಗಳಿಂದ ನಾಗಮಂಗಲದ ಬಿಜಿಎಸ್ ಕಾಲೇಜು ವಿರುದ್ಧ ಜಯ ಸಾಧಿಸಿದ್ದವು. ಇದಕ್ಕೂ ಮುನ್ನ ಪಂದ್ಯಾವಳಿಗೆ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಚಾಲನೆ ನೀಡಿದರು. ನಂತರ ಅವರು ಮಾತನಾಡಿ, ರಾಷ್ಟ್ರೀಯ ಕ್ರೀಡೆಯಾದ ಹಾಕಿಯಲ್ಲಿ ಪಿ.ಧ್ಯಾನ್‌ಚಂದ್ ಅವರ ಹೆಸರು ಅಜರಾಮರ. ರಾಷ್ಟ್ರೀಯ ಹಾಕಿಗೆ ಕೊಡಗಿನ ಕೊಡುಗೆ ಅಪಾರ. ಪ್ರಸ್ತುತ ಪುರುಷ ಹಾಗೂ ಮಹಿಳಾ ಹಾಕಿಯಲ್ಲಿ ದೇಶದ ಸಾಧನೆ ಉತ್ತಮವಾಗಿದೆ ಎಂದರು. ಕ್ರೀಡೆಯಲ್ಲಿ ಸೋಲು-ಗೆಲವು ಸಾಮಾನ್ಯ. ಪ್ರತಿಯೊಬ್ಬರೂ ಕ್ರೀಡಾ ಸೂರ್ತಿಯಿಂದಲೇ ಭಾಗವಹಿಸಬೇಕು ಎಂದು ಅವರು ಸಲಹೆ ಮಾಡಿದರು.
ಮೈವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ.ವೆಂಕಟೇಶ್, ಉಪ ನಿರ್ದೇಶಕ ಡಾ.ಪಿ. ಕೃಷ್ಣಯ್ಯ, ಹಾಕಿ ತರಬೇತುದಾರ ಅಶೋಕ್ ವೈ.ತಿಪ್ಪಸುಂದರ್, ಪತ್ರಕರ್ತ ಧರ್ಮಾಪುರ ನಾರಾಯಣ್ ಮುಖ್ಯ ಅತಿಥಿಗಳಾಗಿದ್ದರು.
ಹುಣಸೂರು ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪುಟ್ಟಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಯುವರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಎಂ. ರುದ್ರಯ್ಯ, ಹುಣಸೂರು ಸರ್ಕಾರಿ ಮಹಿಳಾ ಕಾಲೇಜಿನ ಕರುಣಾಕರ್, ಕುಮಾರ್ ಇದ್ದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕೆ.ಎಸ್.ಭಾಸ್ಕರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಮಹಾಜನ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಭಾಸ್ಕರ್ ಸ್ವಾಗತಿಸಿದರು. ಮೈವಿವಿ ಸ್ನಾತಕೋತ್ತರ ದೈಹಿಕ ಶಿಕ್ಷಣ ಕೌನ್ಸಿಲ್‌ನ ಸಹಾಯಕ ನಿರ್ದೇಶಕ ರವಿ ವಂದಿಸಿದರು.

RELATED ARTICLES
- Advertisment -
Google search engine

Most Popular