ಪಿರಿಯಾಪಟ್ಟಣ: ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಅಪಾರ ಎಂದು ಸಮಾಜ ಸೇವಕಿ ಶುಭಗೌಡ ತಿಳಿಸಿದರು.
ಪಟ್ಟಣದ ಮಂಜುನಾಥ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಪಿರಿಯಾಪಟ್ಟಣ ಯೋಜನಾ ಕಚೇರಿ ವತಿಯಿಂದ ನಡೆದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಮಹಿಳಾ ಸಬಲೀಕರಣವಾದರೆ ದೇಶದ ಅಭಿವೃದ್ಧಿಯಾದಂತೆ ಎಂದರು.
ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷೆ ಕೆ.ಆರ್ ನಿರೂಪಮ ರಾಜೇಶ್ ಮಾತನಾಡಿ ಮಹಿಳೆಯರು ವಿಚಾರಗೋಷ್ಠಿಗಳಲ್ಲಿ ಭಾಗವಹಿಸುವುದರಿಂದ ತಮ್ಮಲ್ಲಿನ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಪಟ್ಟಣದ ಎಸ್ ಬಿಐ ಬ್ಯಾಂಕ್ ವ್ಯವಸ್ಥಾಪಕರಾದ ಸೌಮ್ಯ ಅವರು ಮಾತನಾಡಿ ಮಹಿಳೆಯರು ಸ್ವಾವಲಂಬಿಗಳಾಗಿ ಜೀವಿಸಲು ಗೃಹ ಉಪಯೋಗಿ ಸೇರಿದಂತೆ ಹಲವು ವಿವಿಧ ಕಾರ್ಯ ಚಟುವಟಿಕೆಗಳಿಗೆ ಬ್ಯಾಂಕ್ ವತಿಯಿಂದ ಸಾಲ ಸೌಲಭ್ಯ ದೊರೆಯುತ್ತಿದ್ದು ಸದ್ಬಳಕೆ ಮಾಡಿಕೊಳ್ಳುವಂತೆ ಕೋರಿದರು.

ಕೊಡಗು ಜಿಲ್ಲಾ ನಿರ್ದೇಶಕರಾದ ಲೀಲಾವತಿ ಅವರು ಮಾತನಾಡಿ ಮಹಿಳೆಯರು ಜಾಗೃತರಾದರೆ ಸಮಾಜದ ಬದಲಾವಣೆ ಸಾಧ್ಯ ಈ ನಿಟ್ಟಿನಲ್ಲಿ ಸಂಸ್ಥೆಯ ವತಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಚಿಲ್ಕುಂದ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಮಾಲತಿ ಅವರು ಮಾತನಾಡಿ ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಚಟುವಟಿಕೆ ಬಗ್ಗೆ ನಿಗಾ ವಹಿಸಿ ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯ ಉದ್ದೇಶಗಳಿಗೆ ಬಳಸಿಕೊಳ್ಳುವಂತೆ ಮಾರ್ಗದರ್ಶನ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆ ವತಿಯಿಂದ ಅಭಿವೃದ್ಧಿಪಡಿಸಿದ ಕೆರೆ ಹಸ್ತಾಂತರ, ಟೈಲರಿಂಗ್ ತರಬೇತಿ ಸಮಾರೋಪ ಸಮಾರಂಭ, ಸಾಧಕ ಮಹಿಳೆಯರಿಗೆ ಸನ್ಮಾನ, ಮಾದರಿ ಕೇಂದ್ರಗಳನ್ನು ಗುರುತಿಸಿ ಹಾಗು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಸದಸ್ಯರುಗಳಿಗೆ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭ ಯೋಜನಾಧಿಕಾರಿ ಸುರೇಶ್ ಶೆಟ್ಟಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಪೂಜಾ ಹಾಗೂ ಸಂಚಾಲಕರು, ಮುಖಂಡರಾದ ಎಚ್.ಡಿ ರಾಜೇಂದ್ರ, ಯಾದವಚಾರ್, ಲೋಕೇಶ್, ಸೇವಾ ಪ್ರತಿನಿಧಿಗಳು ಹಾಗೂ ವಿವಿಧ ಒಕ್ಕೂಟದ ಅಧ್ಯಕ್ಷರು ಮತ್ತು ಸದಸ್ಯರು ಇದ್ದರು.