ನವದೆಹಲಿ : ಮಂಗಳವಾರ ನಡೆದ ವಿಮೆನ್ಸ್ ಟಿ20 ವಿಶ್ವಕಪ್ 2026ರ ಸೆಮಿಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಆಸ್ಟ್ರೇಲಿಯಾ ತಂಡವು ಫೈನಲ್ ಹಂತಕ್ಕೆ ಲಗ್ಗೆ ಇಟ್ಟಿದೆ. ಇದರೊಂದಿಗೆ ಆರು ಬಾರಿ ಚಾಂಪಿಯನ್ ಆದ ಆಸ್ಟ್ರೇಲಿಯಾ ತಂಡವು, ಒಟ್ಟಾರೆ 8ನೇ ಬಾರಿಗೆ ಟೂರ್ನಿಯ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆದಿದೆ.
ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡವು ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಲಷ್ಟೇ ಶಕ್ತವಾಯಿತು.
ಆಸ್ಟ್ರೇಲಿಯಾ ಪರ ಸೋಫಿ ಮೋಲಿನ್ಯೂಕ್ಸ್, ಆಶ್ಲೇ ಗಾರ್ಡ್ನರ್ ಮತ್ತು ಜಾರ್ಜಿಯಾ ವೇರ್ಹ್ಯಾಮ್ ತಲಾ ಎರಡು ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿಗೆ ಬುನಾದಿ ಹಾಕಿದರು.
126 ರನ್ ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ, ಕೇವಲ 2 ವಿಕೆಟ್ ಕಳೆದುಕೊಂಡು 42 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿತು. ಬೆತ್ ಮೂನಿ ಅಜೇಯ 61 ರನ್ ಮತ್ತು ಆಶ್ಲೇ ಗಾರ್ಡ್ನರ್ ಅಜೇಯ 35 ರನ್ ಗಳಿಸಿ ತಂಡವನ್ನು ಜಯದತ್ತ ಮುನ್ನಡೆಸಿದರು.
ಗೆಲುವಿನ ನಂತರ ಮಾತನಾಡಿದ ಆಸ್ಟ್ರೇಲಿಯಾ ತಂಡದ ನಾಯಕಿ ಸೋಫಿ ಮೋಲಿನ್ಯೂಕ್ಸ್, ತಂಡದ ಸಂಯಮ ಮತ್ತು ಆಲ್ರೌಂಡ್ ಪ್ರದರ್ಶನವನ್ನು ಶ್ಲಾಘಿಸಿದರು. “ಟಿ20 ವಿಶ್ವಕಪ್ನಲ್ಲಿ ನಾವು ಮುಂದಿನ ಪಂದ್ಯಗಳ ಬಗ್ಗೆ ಹೆಚ್ಚು ಆಲೋಚಿಸದೆ, ಪ್ರತಿಯೊಂದು ಪಂದ್ಯವನ್ನು ಆನಂದಿಸಲು ನಿರ್ಧರಿಸಿದ್ದೆವು. ಈಗ ನಾವು ಫೈನಲ್ ಬಗ್ಗೆ ಯೋಚಿಸಬಹುದು,” ಎಂದು ಅವರು ತಿಳಿಸಿದರು.
ಪವರ್ ಪ್ಲೇನಲ್ಲಿ ತಮ್ಮ ಬೌಲರ್ಗಳ ನಿರ್ಧಾರದ ಬಗ್ಗೆ ಮಾತನಾಡಿದ ಅವರು, ಕಿಮ್ ಗಾರ್ಥ್ ಮತ್ತು ಲೂಸಿ ಅವರ ಬೌಲಿಂಗ್ ಹಾಗೂ ಒತ್ತಡದ ಸನ್ನಿವೇಶದಲ್ಲೂ ತಂಡ ಪ್ರದರ್ಶಿಸಿದ ಸಂಯಮವನ್ನು ಕೊಂಡಾಡಿದರು.
ಎಲ್ಲಿಸ್ ಪೆರಿ ಆರೋಗ್ಯದ ಅಪ್ಡೇಟ್
ಪಂದ್ಯದ ವೇಳೆ ಆಲ್ರೌಂಡರ್ ಎಲ್ಲಿಸ್ ಪೆರಿ ತೊಡೆ ಸ್ನಾಯುವಿನ ಸೆಳೆತದಿಂದ (Hamstring issue) ಮೈದಾನದಿಂದ ಹೊರನಡೆದಿದ್ದರು. ಇದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತಾದರೂ, ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪೆರಿ ಕಣಕ್ಕಿಳಿಯಲಿದ್ದಾರೆ ಎಂದು ನಾಯಕಿ ಮೋಲಿನ್ಯೂಕ್ಸ್ ಸ್ಪಷ್ಟಪಡಿಸಿದ್ದಾರೆ. (ಏಜೆನ್ಸಿಸ್)



