ರಾಮನಗರ: ಬಸವಣ್ಣನವರು ಜಾತಿ ಪದ್ಧತಿ ಸೇರಿದಂತೆ ಸಾಮಾಜಿಕ ಪಿಡುಗುಗಳ ವಿರುದ್ಧ ೧೨ನೇ ಶತಮಾನದಲ್ಲಿಯೇ ದನಿಯೆತ್ತಿದವರು. ಅವರ ಆದರ್ಶಗಳು, ತತ್ವಗಳು ನಮ್ಮ ಜೀವನದುದ್ದಕ್ಕೂ ಅಳವಡಿಸಿಕೊಳ್ಳಬೇಕು ಎಂದು ಉಪನ್ಯಾಸಕರಾದ ರಾಜಶೇಖರ್ ರವರು ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬಸವಣ್ಣನವರ ಕ್ರಾಂತಿಕಾರಿಕ ಹೆಜ್ಜೆಗಳು ಇಂದಿಗೂ ಪ್ರಸ್ತುತ. ಸಾವಿರಕ್ಕೂ ಹೆಚ್ಚು ವಚನಗಳನ್ನು ರಚಿಸುವ ಮೂಲಕ ಸಮಾಜದ ಸುಧಾರಣೆಗೆ ಪಣತೊಟ್ಟಿದವರು. ಅವರ ವಚನಗಳನ್ನು ಅಧ್ಯಯನ ಮಾಡಿದರೆ ನಮ್ಮಲ್ಲಿ ಬದಲಾವಣೆ ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಉಪವಿಭಾಗಧಿಕಾರಿ ಬಿನೋಯ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ರಮೇಶ್ ಬಾಬು, ಸಮುದಾಯದ ಮುಖಂಡರುಗಳಾದ ರುದ್ರೇಶ್, ಶಂಕರಪ್ಪ, ಶಿವಕುಮಾರ್, ರುದ್ರದೇವರು, ಶಿವು, ಎಸ್.ಆರ್ ನಾಗರಾಜು, ಜಗದೀಶ್, ರಾಜಶೇಖರ್ ಹಾಗೂ ಇತರರು ಉಪಸ್ಥಿತರಿದ್ದರು.