ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಸಹಕಾರ ಸಂಘಗಳಲ್ಲಿ ರೈತಪರವಾಗಿ ಕೆಲಸ ಮಾಡಿ ಅವರಿಗೆ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಒದಗಿಸಿದರೆ ನಾವು ಆ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ರಾಜ್ಯ ಸಹಕಾರ ರತ್ನ ಪುರಸ್ಕೃತರಾದ ಮಂಡ್ಯ ಜಿಲ್ಲಾ ಎಸ್‌ಎಲ್‌ಡಿಬಿ ಬ್ಯಾಂಕ್ ನಿರ್ದೇಶಕ ತಿಮ್ಮರಾಯಿಗೌಡ ಹೇಳಿದರು.
ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಆಡಳಿತ ಕಛೇರಿಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬ ರೈತರು ಒಂದಿಲ್ಲೊoದು ಸಹಕಾರ ಸಂಘಗಳ ನಿರ್ದೇಶಕರಾಗಿ ಅಲ್ಲಿ ವ್ಯವಹರಿಸಬೇಕೆಂದು ಸಲಹೆ ನೀಡಿದರು.
ದೇಶದ ಹೆಚ್ಚು ರೈತರ ಆರ್ಥಿಕ ವ್ಯವಹಾರ ಸಹಕಾರ ಸಂಘಗಳಲ್ಲಿ ಇದ್ದು ಆ ಮೂಲಕ ಸರ್ಕಾರಗಳು ನಮಗೆ ಸಾಲ ಸವಲತ್ತು ನೀಡುವ ಜತೆಗೆ ಇತರ ಅನುಕೂಲಗಳನ್ನು ಒದಗಿಸುತ್ತಿದ್ದು ಎಲ್ಲರೂ ಇವುಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದ ಅವರು ರೈತರು ಸಹ ಸಂಘಗಳಿoದ ಪಡೆದ ಸಾಲಗಳನ್ನು ಮರುಪಾವತಿ ಮಾಡಬೇಕೆಂದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ ಸಹಕಾರ ಸಂಘಗಳು ರೈತರಿಗೆ ಸಕಾಲದಲ್ಲಿ ಸಾಲ ನೀಡುವುದರ ಜತೆಗೆ ಕೃಷಿ ಚಟುವಟಿಕೆ ಕೈಗೊಳ್ಳಲು ಮಾರ್ಗದರ್ಶನ ನೀಡುತ್ತಿದ್ದು ನಮ್ಮೊಂದಿಗೆ ಎಲ್ಲರೂ ಕೈ ಜೋಡಿಸಿದರೆ ಉತ್ತಮವಾಗಿ ಕೆಲಸ ಮಾಡಬಹುದು ಎಂದರು.
ಉಪಾಧ್ಯಕ್ಷೆ ಪುಷ್ಪರೇವಣ್ಣ, ನಿರ್ದೇಶಕರಾದ ಬಿ.ಸಿದ್ದೇಗೌಡ, ಪ್ರದೀಪ್‌ಕುಮಾರ್, ಬಿ.ಎಸ್.ಚಂದ್ರಹಾಸ, ಎಂ.ಎಸ್.ಹರಿಚಿದಂಬರ್ ಪ್ರೇಮಕುಳ್ಳಬೋರೇಗೌಡ, ಎನ್.ಸಿ.ಪ್ರಸಾದ್, ಆರ್.ಸಿ.ರಮೇಶ್, ಕಲಾವತಿ, ಚಂದ್ರಶೇಖರ್, ಕೆ.ಟಿ.ಚಂದ್ರೇಗೌಡ, ಪರಶುರಾಮಯ್ಯ, ವ್ಯವಸ್ಥಾಪಕ ನವೀನ್, ನಿವೃತ್ತ ವ್ಯವಸ್ಥಾಪಕಿ ಗಾಯತ್ರಮ್ಮ, ಸಿಬ್ಬಂದಿಗಳಾದ ಕುಮಾರ್, ಹಾಲಪ್ಪ, ಉಷಾ, ಶೃತಿ ಮತ್ತಿತರರು ಹಾಜರಿದ್ದರು.