ಮದ್ದೂರು: ಬನ್ನಹಳ್ಳಿ ಏತ ನೀರಾವರಿ ಯೋಜನೆ ಮೂಲಕ ಕಸಬಾ ಹೋಬಳಿಯ 17 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಇನ್ನು ಮೂರ್ನಾಲ್ಕು ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.
ಮದ್ದೂರು ತಾಲೂಕಿನ ಕಬ್ಬಾರೆ, ಕೂಳಗೆರೆ ಹಾಗೂ ಬನ್ನಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿಗಳನ್ನು ಅಧಿಕಾರಿಗಳ ಜೊತೆಗೂಡಿ ಮಂಗಳವಾರ ಪರಿಶೀಲನೆ ನಡೆಸಿದರು.
ಸೋಮನಹಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಜಮೀನುಗಳು ಮಳೆಯಾಶ್ರಿತ ಪ್ರದೇಶವಾಗಿವೆ. ಇತ್ತಿಚೆಗೆ ಮಳೆಯ ಪ್ರಮಾಣ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದ ಕೆರೆ – ಕಟ್ಟೆಗಳು ನಿರೀಕ್ಷಿತ ಪ್ರಮಾಣದಲ್ಲಿ ನೀರು ತುಂಬದೆ ಬರಗಾಲದ ಬವಣೆಗೆ ಸಿಲುಕಿದ್ದವು. ಹೀಗಾಗಿ ಇಗ್ಗಲೂರು ಬ್ಯಾರೇಜ್ ಹಿನ್ನೀರಿನಲ್ಲಿ ದೊರೆಯುವ ನೀರನ್ನು ಸಮರ್ಪಕವಾಗಿ ಬಳಸಿಕೊಂಡು 77 ಕೋಟಿ ವೆಚ್ಚದಲ್ಲಿ ಕಸಬಾ ಹೋಬಳಿಯ 17 ಕೆರೆಗಳನ್ನು ತುಂಬಿಸುವ ಬನ್ನಹಳ್ಳಿ ಏತ ನೀರಾವರಿ ಯೋಜನೆಯನ್ನು ರೂಪಿಸಲಾಗಿದೆ. ಈಗಾಗಲೇ ಅಂದಾಜು 52 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಮುಗಿದಿದ್ದು, ಇನ್ನುಳಿದ ಕಾಮಗಾರಿಗೆ ಸರ್ಕಾರದಿಂದ ಆದಷ್ಟು ಬೇಗ ಅನುದಾನ ಬಿಡುಗಡೆ ಮಾಡಿಸಿ ಇನ್ನು ಮೂರ್ನಾಲ್ಕು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಕಸಬಾ ಹೋಬಳಿಯ ಶಿಂಷಾ ಎಡದಂಡೆಯಲ್ಲಿ ಬರುವ ತಿಪ್ಪೂರು, ಮಾದನಾಯಕನಹಳ್ಳಿ, ತೈಲೂರು, ಬ್ಯಾಡರಹಳ್ಳಿ, ಆಲೂರು, ರಾಜೇಗೌಡನದೊಡ್ಡಿ, ಕೆ.ಹೊನ್ನಲಗೆರೆ, ಭೀಮನಕೆರೆ, ಹಾಗಲಹಳ್ಳಿ, ಕಬ್ಬಾರೆ, ಹಳ್ಳಿಕೆರೆ, ಅಂಕೇಗೌಡನದೊಡ್ಡಿ, ಅರೆಕಲ್ಲುದೊಡ್ಡಿ ಕೆರೆಗಳನ್ನು ತುಂಬಿಸಲು ಉದ್ದೇಶಿಸಲಾಗಿದೆ. ಇವುಗಳಲ್ಲದೆ ಈ ವ್ಯಾಪ್ತಿಯ ಗ್ರಾಮಗಳಲ್ಲಿ ಕೆಲವೊಂದು ಕಟ್ಟೆಗಳು ಬರಲಿದ್ದು, ಅವುಗಳಿಗೂ ನೀರು ತುಂಬಿಸಲು ಪೈಪ್ ಲೈನ್ ಅಳವಡಿಸಲಾಗಿದೆ. ಈ ಯೋಜನೆಯಿಂದ ಅಂದಾಜು 2638 ಹೆಕ್ಟೇರ್ ಪ್ರದೇಶ ರೈತರು ನೀರಾವರಿ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ ಎಂದರು.
ಇದೇ ವೇಳೆ ಕಾವೇರಿ ನೀರಾವರಿ ನಿಗಮದ ಇಇ ನಂಜುಂಡೇಗೌಡ, ಎಇಇ ನಾಗರಾಜ್, ಸಣ್ಣ ನೀರಾವರಿ ಇಲಾಖೆ ಇಇ, ಎಇಇ ಚಿಕ್ಕಣ್ಣ, ಎಇ ವೆಂಕಟೇಶ್, ಕಿರಣ್ ಮತ್ತಿತರರು ಇದ್ದರು.