ಚಿಂತಾಮಣಿ: ತಾಲ್ಲೂಕಿನ ಅಂಬಾಜಿದುರ್ಗ ಹೋಬಳಿಯ ಸ್ವಾರಪ್ಪಲ್ಲಿ ಗ್ರಾಮದಲ್ಲಿ ಕೃಷಿ ಹೊಂಡವನ್ನು ಸ್ವಚ್ಛಗೊಳಿಸುತ್ತಿದ್ದ ಸಮಯದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಸಂಪರ್ಕವಾಗಿ ಕಾರ್ಮಿಕ ಮೃತಪಟ್ಟಿದ್ದಾನೆ.
ಬೂರಗಮಾಕಲಹಳ್ಳಿ ಗ್ರಾಮದ ಸುನಿಲ್(೨೫) ಮೃತಪಟ್ಟ ವ್ಯಕ್ತಿ. ಸ್ವಾರಪ್ಪಲ್ಲಿ ಬಳಿ ಇರುವ ಗ್ರಾಮದ ದೊಡ್ಡಮುನಿಶಾಮಿ ಎಂಬ ರೈತನ ತೋಟದಲ್ಲಿ ಕೃಷಿ ಹೊಂಡವನ್ನು ಸ್ವಚ್ಛಗೊಳಿಸುತ್ತಿದ್ದಾಗ ದುರ್ಘಟನೆ ನಡೆದಿದೆ. ಗ್ರಾಮದ ರವಿ, ಅರ್ಜುನ್, ಶಿವಾರೆಡ್ಡಿ ಮತ್ತು ಸುನಿಲ್ ಒಳಗೊಂಡ ೪ ಮಂದಿ ಕೃಷಿ ಹೊಂಡವನ್ನು ಸ್ವಚ್ಛಗೊಳಿಸುವ ಕೂಲಿ ಕೆಲಸಕ್ಕೆ ಹೋಗಿದ್ದರು.
ನಾಲ್ವರು ಕೃಷಿ ಹೊಂಡದಲ್ಲಿ ನಿಂತುಕೊಂಡು ಕೆಲಸ ಮಾಡುತ್ತಿದ್ದರು. ಆಕಸ್ಮಿಕವಾಗಿ ವಿದ್ಯುತ್ ಶಾಕ್ ಹೊಡೆದು ಸುನಿಲ್ ಅಸ್ವಸ್ಥಗೊಂಡಿದ್ದಾನೆ. ಕೂಡಲೇ ಚಿಕಿತ್ಸೆಗಾಗಿ ನಗರದ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಸುನಿಲ್ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದನು. ಮೃತನ ಅಣ್ಣ ಅನಿಲ್ ಗ್ರಾಮಾಂತರ ಠಾಣೆಗೆ ದೂರು ನೀಡಿ, ಕೂಲಿ ಕೆಲಸಕ್ಕೆ ಕರೆದುಕೊಂಡು ಹೋದ ಮಾಲೀಕರು ಯಾವುದೇ ಮುಂಜಾಗ್ರತಾಕ್ರಮವನ್ನು ಕೈಗೊಳ್ಳದೆ ನಿರ್ಲಕ್ಷ್ಯತೆಯಿಂದ ಕೆಲಸ ಮಾಡಿಸಿದ್ದರಿಂದ ಸಾವು ಸಂಭವಿಸಿದೆ. ತೋಟದ ಮಾಲೀಕರ ವಿರುದ್ಧ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.