ಮೈಸೂರು: ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಹಿಳಾ ಕಾಂಗ್ರೆಸ್ ವಿಭಾಗದ ಮೂರನೇ ಕಾರ್ಯಕಾರಣಿ ಸಭೆಯನ್ನು ಇಂದಿರಾ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಇದೆ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ಮಾತನಾಡಿ, ಕಳೆದ ೨೦೨೩ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಗೆಲುವು ಸಾಧಿಸಲು ಮಹಿಳಾ ಕಾರ್ಯಕರ್ತರು ಬಹಳ ಶ್ರಮ ವಹಿಸಿದ್ದಾರೆ. ಅವರಿಗೆ ಜಿಲ್ಲಾ ಕಾಂಗ್ರೆಸ್‌ನ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಮಹಿಳೆಯರಿಗೆ ಹಲವಾರು ವೈಯಕ್ತಿಕ ಸಮಸ್ಯೆಗಳು ಇವೆ. ಇದರ ನಡುವೆಯೂ ಪಕ್ಷಕ್ಕೆ ಕೆಲಸ ಮಾಡಿರುವುದು ನಮ್ಮ ಕಾಂಗ್ರೆಸ್ ಮಹಿಳಾ ಸಂಘಟನೆಯನ್ನು ಪ್ರದರ್ಶಿಸುತ್ತದೆ. ಸರ್ಕಾರ ಬಂದ ಮೇಲೆ ಎಲ್ಲರನ್ನು ಗೌರಯುತವಾಗಿ ನೋಡಿಕೊಳ್ಳಬೇಕು. ಆ ಕೆಲಸವನ್ನು ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಮಾಡುತ್ತದೆ. ಮಹಿಳೆಯರಿಗೆ ಸೂಕ್ತ ಸ್ಥಾನಮಾನವನ್ನು ಸಿದ್ದರಾಮಯ್ಯ ನವರ ನೇತೃತ್ವದ ಸರ್ಕಾರ ನೀಡುತ್ತದೆ ಎಂದು ಭರವಸೆ ನೀಡಿದರು.
ಮುಂಬರುವ ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯಿತಿ ಹಾಗೂ ಲೋಕಸಭೆ ಚುನಾವಣೆಯಲ್ಲಿ ಮಹಿಳೆಯರ ಪಾತ್ರ ಹೆಚ್ಚಾಗಿದ್ದು ಮಹಿಳಾ ಕಾಂಗ್ರೆಸ್ ಮತ್ತಷ್ಟು ಬಲಿಷ್ಠವಾಗಬೇಕು. ಸ್ವತಂತ್ರ ಭಾರತದಲ್ಲಿ ಕಾಂಗ್ರೆಸ್ ಪಕ್ಷವನ್ನು ಹೊರತು ಪಡಿಸಿ ಮತ್ತ್ಯಾವ ಪಕ್ಷಗಳು ಕೂಡ ಮಹಿಳೆಯರಿಗೆ ಹೆಚ್ಚಾಗಿ ಪ್ರಾಮುಖ್ಯತೆ ನೀಡಿಲ್ಲ. ಇಂದಿರಾ ಗಾಂಧಿಯವರನ್ನು ಪ್ರಥಮ ಮಹಿಳಾ ಪ್ರಧಾನ ಮಂತ್ರಿಯಾಗಿ ಮಾಡಿರುವುದು ಕಾಂಗ್ರೆಸ್ ಪಕ್ಷ ಎಂದು ಇತಿಹಾಸ ಸ್ಮರಿಸಿದರು.
ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ನೀಡಿರುವ ೫ ಗ್ಯಾರಂಟಿಗಳಲ್ಲಿ ೪ ಗ್ಯಾರಂಟಿಗಳು ಮಹಿಳಾ ಪ್ರಧಾನ ಕಾರ್ಯಕ್ರಮಗಳಾಗಿವೆ. ಇವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಜನಜಾಗೃತಿ ಮೂಡಿಸಬೇಕು. ಹಾಗೆಯೇ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಿಚ್ಚಳ ಬಹುಮತ ಬರಲು ರಾಜ್ಯದಲ್ಲಿ ಮಹಿಳಾ ಶಕ್ತಿಯೇ ಕಾರಣ. ಕಾಂಗ್ರೆಸ್ ಪರವಾಗಿ ಅತೀ ಹೆಚ್ಚು ಒಲವು ತೋರಿದ್ದರಿಂದ ಸರ್ಕಾರ ರಚನೆ ಸಾಧ್ಯವಾಗಿದ್ದು, ಕಾಂಗ್ರೆಸ್ ಪಕ್ಷ ಮಾತ್ರ ಮಹಿಳಾ ಸಬಲೀಕರಣಕ್ಕೆ ಹಾಗೂ ಮಹಿಳೆಯರ ಸಾಮಾಜಿಕ ಭದ್ರತೆಗೆ ಸೂಕ್ತ ಸ್ಥಾನಮಾನ ಕೊಡುವ ಪಕ್ಷ ಎಂದರು.
ಸಭೆಯಲ್ಲಿ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಕಡತಲೆ ಮಂಜುನಾಥ್, ಮೈಸೂರು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ, ರಾಜ್ಯ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ಪುಷ್ಪವಲ್ಲಿ, ಸುಧಾ ಮಹದೇವಯ್ಯ, ಲೇಖ ವೆಂಕಟೇಶ್, ಶಾರದಾ ಸಂಪತ್ತು, ಬೃಂದಾ ಕೃಷ್ಣೇಗೌಡ, ಜಿಲ್ಲೆಯ ಮಹಿಳಾ ಕಾಂಗ್ರೆಸ್‌ನ ಎಂಟು ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಇತರೆ ಪ್ರಮುಖ ಮಹಿಳಾ ಪದಾಧಿಕಾರಿಗಳು ಭಾಗವಹಿಸಿದ್ದರು.
ಜಿಲ್ಲಾ ಓಬಿಸಿ ಘಟಕ, ಜಿಲ್ಲಾ ಮೈನಾರಿಟಿ ವಿಭಾಗ, ಜಿಲ್ಲಾ ವಿದ್ಯಾರ್ಥಿ ಕಾಂಗ್ರೆಸ್, ಜಿಲ್ಲಾ ರೈತ ಘಟಕದಿಂದಲೂ ಸರಣಿ ಸಭೆಗಳನ್ನು ನಡೆಸಲಾಯಿತು.