ಬುಡಾಪೆಸ್ಟ್ : ಹಂಗೇರಿಯ ಬುಡಾಪೆಸ್ಟ್ ನಲ್ಲಿ ಶುಕ್ರವಾರ ನಡೆದ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಆಡುವ ಮೂಲಕ ನೀರಜ್ ಚೋಪ್ರಾ ಅವರು ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ತಮ್ಮ ಅಭಿಯಾನವನ್ನು ಆರಂಭಿಸಿದರು. ಭಾರತದ ಸ್ಟಾರ್ ಅತ್ಲೀಟ್ ತನ್ನ ಮೊದಲ ಪ್ರಯತ್ನದಲ್ಲಿ ೮೮.೭೭ ಮೀಟರ್ ಗಳನ್ನು ದಾಖಲಿಸಿದರು, ಈ ಋತುವಿನಲ್ಲಿ ಶ್ರೇಷ್ಠ ನಿರ್ವಹಣೆ ತೋರಿದ ನೀರಜ್ ಫೈನಲ್‌ಗೆ ಅರ್ಹತೆ ಪಡೆದರು.
ಒಲಿಂಪಿಕ್ಸ್ ಚಾಂಪಿಯನ್ ನೀರಜ್ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗುವತ್ತ ಚಿತ್ತಹರಿಸಿದ್ದಾರೆ. ಫೈನಲ್ ಸ್ಪರ್ಧೆಯು ಭಾನುವಾರ ನಡೆಯಲಿದೆ.
ಒಟ್ಟಾರೆಯಾಗಿ ೨೭ ಜಾವೆಲಿನ್ ಎಸೆತಗಾರರನ್ನು ಎ ಹಾಗೂ ಬಿ ಗುಂಪುಗಳಾಗಿ ವಿಂಗಡಿಸಲಾಗಿದೆ. ರವಿವಾರದಂದು ನಿಗದಿಯಾಗಿರುವ ೧೨ ಸ್ಪರ್ಧಿಗಳಿರುವ ಫೈನಲ್‌ಗಾಗಿ ಅರ್ಹತಾ ಸುತ್ತನ್ನು ಆಡಲಾಗುತ್ತಿದೆ. ಫೈನಲ್‌ಗೆ ಸ್ವಯಂ ಆಗಿ ಅರ್ಹತೆ ಪಡೆಯಲು ೮೩.೦೦ ಮೀ. ಜಾವೆಲಿನ್ ಎಸೆಯಬೇಕು. ನೀರಜ್ ಎ ಗುಂಪಿನ ಪಟ್ಟಿಯಲ್ಲಿ ೧೮ನೇ ಆಟಗಾರನಾಗಲಿದ್ದಾರೆ.