ಮೈಸೂರು: ಕೆ.ಆರ್.ಆಸ್ಪತ್ರೆಯಲ್ಲಿರುವ ಮೂತ್ರರೋಗ ಸಂಸ್ಥೆ ಹಾಗೂ ಶಾರದಾ ವಿಲಾಸ ಔಷಧ ವಿಜ್ಞಾನ ಮಹಾ ವಿದ್ಯಾಲಯ ಮೊದಲಾದವುಗಳ ಸಂಯುಕ್ತಾಶ್ರಯದಲ್ಲಿ ಮಾ.೧೪ರಂದು ನಗರದಲ್ಲಿ ವಿಶ್ವ ಮೂತ್ರಪಿಂಡ ದಿನಾಚರಣೆ ಪ್ರಯುಕ್ತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿಭಾಗದ ಮುಖ್ಯಸ್ಥ ಡಾ.ಜೆ.ಬಿ.ನರೇಂದ್ರ ತಿಳಿಸಿದರು.
ಅಂದು ಮಾ.೧೪ರಂದು ಬೆಳಗ್ಗೆ ೭ ಗಂಟೆಗೆ ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿಯಿಂದ ಜನತೆಗೆ ಮೂತ್ರಪಿಂಡದ ಆರೋಗ್ಯ ಕುರಿತು ಅರಿವು ಮೂಡಿಸುವ ವಾಕಥಾನ್ ಆಯೋಜಿಸಲಾಗಿದೆ. ಬಳಿಕ ಕೆ.ಆರ್.ಆಸ್ಪತ್ರೆಯಲ್ಲಿ ಮೂತ್ರಪಿಂಡ ಕುರಿತಂತೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಇರಲಿದೆ. ಮೂತ್ರಪಿಂಡ ಸಮಸ್ಯೆ ಕಂಡು ಬಂದ ಕೂಡಲೇ ಡಯಾಲಿಸಿಸ್ ಅಗತ್ಯ ಎಂಬ ಭಾವನೆ ಸರಿಯಲ್ಲ. ಮೂತ್ರಪಿಂಡದ ವೈಫಲ್ಯ ಕಾಣಿಸಿಕೊಳ್ಳುವ ಮೊದಲೇ ಕೆಲವೊಂದು ಸೂಚನೆ ಸಿಗುತ್ತದೆ. ಈ ವೇಳೆ ಎಚ್ಚೆತ್ತುಕೊಂಡಲ್ಲಿ ಔಷಧಗಳ ಆಧಾರದ ಮೇಲೆ ಮೂತ್ರಪಿಂಡದ ಆರೋಗ್ಯ ಕಾಯ್ದುಕೊಳ್ಳಬಹುದಾಗಿದೆ. ಈ ರೀತಿಯ ಅರಿವನ್ನು ಅಂದಿನ ಕಾರ್ಯಕ್ರಮಗಳ ವೇಳೆ ಜನತೆಯಲ್ಲಿ ಮೂಡಿಸಲಾಗುವುದೆಂದರು.