ಜನವರಿ 31 ಹಾಗೂ ಫೆಬ್ರವರಿ 1 ರಂದು ವಿಶ್ವ ಕೊಂಕಣಿ ನಾಟಕ ಮಹೋತ್ಸವ ಹಾಗೂ ಪ್ರತಿಷ್ಠಿತ ಡಾ ಪಿ ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಠ ಹಾಗೂ ಅನುವಾದ ಪ್ರಶಸ್ತಿ ಪದಾನ ಸಮಾರಂಭವು ನಗರದ ಟಿವಿ ರಮಣ ಪೈ ಸಭಾಂಗಣ, ಕೊಡಿಯಾಲ್-ಬೈಲ್ ನಲ್ಲಿ ಆಯೋಜಿಸಲಾಗಿದೆ ಎಂದು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿಎ ನಂದಗೋಪಾಲ ಶೆಣೈ ತಿಳಿಸಿದ್ದಾರೆ.
ಅವರು ಮಂಗಳೂರಿನ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ವಿಶ್ವ ಕೊಂಕಣಿ ನಾಟಕ ಮಹೋತ್ಸವದ ಅಂಗವಾಗಿ ನಾಲ್ಕು ಪ್ರಸಿದ್ದ ಕೊಂಕಣಿ ನಾಟಕಗಳ ಪ್ರದರ್ಶನ ನಡೆಯಲಿದ್ದು ಮೊದಲ ದಿನ ಸಂಜೆ 5.00 ರಿಂದ 6.00 ಗಂಟೆಯ ತನಕ ಮಂಗಳೂರು ಸಾಧನಾ ಬಳಗ ಪ್ರಕಾಶ್ ಶೆಣೈ ನೇತೃತ್ವದ ಮಕ್ಕಳ ಕಲಾತಂಡದವರು “ಭಕ್ತ ಪುರಂದರ” ಯೆಂಬ ಕೊಂಕಣಿ ನಾಟಕವನ್ನು ಪ್ರದರ್ಶನ, ಅಂದು ಸಂಜೆ 7.00 ರಿಂದ 8.00 ಗಂಟೆ ತನಕ ಮಂಗಳೂರಿನ ರಂಗ ಅಧ್ಯಯನ ಕೇಂದ್ರ ತಂಡದವರು ಅಭಿನಯಿಸುವ ಜನಪ್ರಿಯ “ಚಿಕೆ ರಾಬ್” ಕೊಂಕಣಿ ನಾಟಕ ಪ್ರದರ್ಶನಗೊಳ್ಳಲಿದೆ.
ಎರಡನೆಯ ದಿನದಂದು ಸಂಜೆ 5.00 ರಿಂದ 6.00 ಗಂಟೆ ತನಕ ಗೋವಾದ ನಟರಂಗ ಕ್ರಿಯೇಶನ್ಸ್ ತಂಡದವರಿಂದ “ಹೆಡೋನಿಸ್ಟ್ ಕೊಂಕಣಿ ನಾಟಕವು ಪ್ರದರ್ಶನಗೊಳ್ಳಲಿದೆ. ಸಂಜೆ 6 ರಿಂದ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದ್ದು, ಹಿರಿಯ ಕೊಂಕಣಿ ರಂಗಕರ್ಮಿ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ಇವರು, ಈ ಬಾರಿಯ “ಡಾ ಪಿ ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಠ ಪ್ರಶಸ್ತಿ” ಸ್ವೀಕರಿಸಲಿದ್ದಾರೆ. ಹಿರಿಯ ಕೊಂಕಣಿ ಅನುವಾದಕಿ ಮಾಯಾ ಅನಿಲ್ ಖರಂಗಟೆ ಇವರು ಈ ವರ್ಷದ “ಡಾ ಪಿ ದಯಾನಂದ ಪೈ ವಿಶ್ವ ಕೊಂಕಣಿ ಅನುವಾದ ಪ್ರಶಸ್ತಿ” ಸ್ವೀಕರಿಸಲಿದ್ದಾರೆ ಎಂದರು.
ಸಂಜೆ 7.00 ರಿಂದ 8.00 ಗಂಟೆ ತನಕ ನಾಟ್ಯ ನಿಕೇತನ ಕೊಲ್ಯದ ವತಿಯಿಂದ ಕರ್ನಾಟಕ ಕಲಾಶ್ರೀ ಗುರು ರಾಜಶ್ರೀ ಉಳ್ಳಾಲ ಇವರ ತಂಡದವರಿಂದ “ಪಾರಿಜಾತ ಫೂಲ್” ಗೀತ ನೃತ್ಯ ನಾಟಕವೂ ಪ್ರದರ್ಶನ ಗೊಳ್ಳಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಡಾ ಕಸ್ತೂರಿ ಮೋಹನ್ ಪೈ , ಎಂ ಆರ್ ಕಾಮತ್ , ಗೋವಿಂದ್ , ರತ್ನಾಕರ್ ಸಹಿತ ಮುಂತಾದವರು ಉಪಸ್ಥಿತರಿದ್ದರು.
ವರದಿ: ಶಂಶೀರ್ ಬುಡೋಳಿ



