ರಾಮನಗರ: ಮಹಿಳೆಯರಿಗೆ ಋತು ಚಕ್ರ ಸಹಜ ಪ್ರಕ್ರಿಯೆಯಾಗಿದ್ದು ಕೆಲವರಲ್ಲಿ ತೀವ್ರ ರಕ್ತಸ್ರಾವದಿಂದ ರಕ್ತಹೀನತೆ ಇತ್ಯಾದಿ ಸಮಸ್ಯೆಗಳು ಕಂಡುಬರಬಹುದು ಆದ್ದರಿಂದ ಪೌಷ್ಟಿಕ ಆಹಾರ ಸೇವನೆ, ಕುಡಿಯುವ ನೀರು, ವಿಶ್ರಾಂತಿ ಬಹಳ ಮುಖ್ಯವಾಗಿದ್ದು ಮುಟ್ಟಿನ ಸಮಯದಲ್ಲಿ ಎಲ್ಲರೂ ಆರೋಗ್ಯದ ದೃಷ್ಠಿಯಿಂದ ವೈದ್ಯರು ಸೂಚಿಸಿದ ಸಲಹೆಗಳನ್ನು ಅನುಸರಿಸುವಂತೆ ವೈದ್ಯಾಧಿಕಾರಿ ಡಾ. ಆಯೆಷಾ ಅವರು ತಿಳಿಸಿದರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ವಿಶ್ವ ಋತು ಚಕ್ರ / ಮುಟ್ಟಿನ ನೈರ್ಮಲ್ಯ ದಿನದ ಅಂಗವಾಗಿ ರಾಮನಗರ ಟೌನಿನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಸಭಾಂಗಣಲ್ಲಿ ಮುಟ್ಟಿನ ನೈರ್ಮಲ್ಯ ನಿರ್ವಹಣೆ ಕುರಿತು ಆಯೋಜಿಸಲಾಗಿದ್ದ ಜಾಗೃತಿ ಮತ್ತು ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಋತು ಚಕ್ರದ ಸ್ವಚ್ಛತೆಯ ಜೊತೆಗೆ ಪರಿಸರ ಸ್ವಚ್ಛತೆ ಕಾಪಾಡುವುದು ಮುಖ್ಯವಾಗಿದ್ದು ಮುಟ್ಟಿನ ಸಂದರ್ಭದಲ್ಲಿ ಶೌಚಾಲಯ ಮತ್ತು ಋತು ಚಕ್ರ ಉತ್ಪನ್ನ ಧರಿಸುವ ಮುನ್ನ, ಬದಲಾಯಿಸಿದ ನಂತರ ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಅರ್ಪಿತ ಕೆ.ಜೆ. ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮುಟ್ಟಿನ ನೈರ್ಮಲ್ಯ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದ್ದು, ವೈಯಕ್ತಿಕ ನೈರ್ಮಲ್ಯಗಳಲ್ಲಿ ಮುಟ್ಟಿನ ನೈರ್ಮಲ್ಯ ನಿರ್ವಹಣೆ ಬಹಳ ಮುಖ್ಯವಾಗಿದ್ದು ಆ ಸಮಯದಲ್ಲಿ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಲು ಸಾಧ್ಯ ಎಂದು ತಿಳಿಸಿದರು.
ಮಹಿಳೆಯರು ಇಂದಿಗೂ ಮುಟ್ಟಿನ ಸಮಯ ಅಪವಿತ್ರವೆಂದು ಭಾವಿಸಿ ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುವುದಿಲ್ಲ ಮುಟ್ಟಿನ ಸಮಯದಲ್ಲಿ ಹಾರ್ಮೋನ್ ವ್ಯತ್ಯಯದಿಂದ ಭಯ, ಆತಂಕ, ಮಾನಸಿಕ ಒತ್ತಡದಿಂದ ಬಳಲುತ್ತಾರೆ. ಋತು ಚಕ್ರ ೨೮ ದಿನಗಳಿಗೊಮ್ಮೆ ಸಹಜವಾದ ಮುಟ್ಟಿನ ಪ್ರಕ್ರಿಯೆಯಾಗಿದ್ದು ಇದರಿಂದ ಯಾವುದೇ ಭಯ, ಆತಂಕ, ಖಿನ್ನತೆಗೆ ಒಳಗಾಗಬಾರದು, ಮುಟ್ಟಿನ ಸಮಯದಲ್ಲಿ ರಕ್ತಸ್ರಾವ, ಹೊಟ್ಟೆನೋವು, ಸುಸ್ತು, ವಯಸ್ಕರಲ್ಲಿ ಮೊಡವೆಗಳು, ಇತ್ಯಾದಿ ಸಮಸ್ಯೆಗಳು ಕಂಡುಬರುವುದು ಸಹಜವಾಗಿರುತ್ತದೆ. ಕೆಲವರಲ್ಲಿ ಹೆಚ್ಚಾಗಿ ರಕ್ತಸ್ರಾವ, ಹೊಟ್ಟೆನೋವು, ವಾಸನೆಯುಕ್ತ ಬಿಳಿಸ್ರಾವ ಕಾಣಿಸಿಕೊಳ್ಳಬಹುದು ಇಂತಹ ಸಂದರ್ಭಗಳಲ್ಲಿ ಮಹಿಳಾ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ ಜೊತೆಗೆ ಪೌಷ್ಠಿಕ ಆಹಾರ ಸೇವನೆ, ವಿಶ್ರಾಂತಿ ಪಡೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಪುಟ್ಟಸ್ವಾಮಿ, ದೈಹಿಕ ಶಿಕ್ಷಕರಾದ ವಿಶ್ವನಾಥ್, ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು, ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.
