ಗುಂಡ್ಲುಪೇಟೆ: ತಾಲೂಕಿನ ಪರಿಸರ ಹೊಂಗಹಳ್ಳಿ ಸರ್ಕಾರಿ ಶಾಲೆಯಲ್ಲಿ ವಿಶ್ವ ಹಾವು ದಿನಾಚರಣೆಯನ್ನು ಆಚರಿಸಲಾಯಿತು.
ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿ, ಕಳೆದ ಮೂವತ್ತು ವರ್ಷಗಳಲ್ಲಿ ಹಾವುಗಳ ಜಾಗತಿಕ ಜನಸಂಖ್ಯೆಯು ಶೇ.60ಕ್ಕಿಂತ ಕಡಿಮೆಯಾಗಿದೆ. ಅನೇಕ ಹಾವು ಪ್ರಭೇದಗಳು ಅಳಿವಿನಂಚಿನಲ್ಲಿವೆ. ಹಾವಿನ ವಿಷವನ್ನು ಅನೇಕ ರೋಗಗಳ ಔಷಧಿಗಳಲ್ಲಿಯೂ ಬಳಸಲಾಗುತ್ತದೆ. ಹೀಗಾಗಿ ಇವುಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ವಿಶ್ವ ಹಾವು ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಹಾವುಗಳು ಆಹಾರ ಸರಪಳಿಗೆ ಅತ್ಯಗತ್ಯ ಹಾಗೂ ಪರಿಸರದ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಜೊತೆಗೆ ಕೀಟಗಳನ್ನು ನಿಯಂತ್ರಿಸುತ್ತವೆ. ಪೌರಾಣಿಕ ಕಥೆಗಳಲ್ಲಿಯೂ ಹಾವುಗಳ ಪಾತ್ರವಿದೆ. ಭೂಮಿಯ ಮೇಲೆ 3,500 ಕ್ಕೂ ಹೆಚ್ಚು ಜಾತಿಯ ಹಾವುಗಳಿವೆ. ಈ ಪೈಕಿ ಸುಮಾರು 600 ಹಾವುಗಳು ಮಾತ್ರ ವಿಷಕಾರಿ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕೇವಲ 200 ಜಾತಿಯ ಹಾವುಗಳು ಮಾತ್ರ ಮಾನವ ಜೀವಕ್ಕೆ ಗಂಭೀರವಾದ ಅಪಾಯವನ್ನುಂಟುಮಾಡುತ್ತವೆ ಎಂದರು.
ಹಾವನ್ನು ಕಂಡು ಎಷ್ಟೇ ಭಯಭೀತರಾದರೂ ಇವುಗಳನ್ನು ಪ್ರೀತಿಸುವವರೂ ಸಹ ಇದ್ದಾರೆ. ನಾವು ಅವುಗಳಿಗೆ ತೊಂದರೆ ಕೊಟ್ಟರೆ, ತೊಂದರೆ ಕೊಡಲು ಮುಂದಾಗಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಮಹದೇಶ್ವರಸ್ವಾಮಿ, ಶಿಕ್ಷಕರಾದ ಪ್ರಭಾಕರ್ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಹಾಗು ಸಿಬ್ಬಂದಿ ವರ್ಗದವರು ಹಾಜರಿದ್ದರು.