ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನ 50 ಕೆಜಿ ಫ್ರೀಸ್ಟೈಲ್ ಕುಸ್ತಿ ಫೈನಲ್ ನಲ್ಲಿ ಅನರ್ಹಗೊಂಡ ಬಳಿಕ ವಿನೇಶ್ ಫೋಗಟ್ ಕುಸ್ತಿಯಿಂದ ನಿವೃತ್ತಿ ಘೋಷಿಸಿದ್ದಾರೆ.
ಈ ಸಂಬಂಧ ಇಂದು ಬೆಳಗ್ಗೆ ಅವರು ಎಕ್ಸ್‌ನಲ್ಲಿ ಭಾವುಕ ಸಾಲು ಬರೆದುಕೊಂಡಿದ್ದು, ಇದರಲ್ಲಿ ತಮ್ಮ ನಿರ್ಧಾರವನ್ನು ಹಂಚಿಕೊಂಡಿದ್ದಾರೆ.
ಕುಸ್ತಿ ನನ್ನ ವಿರುದ್ಧದ ಪಂದ್ಯವನ್ನು ಗೆದ್ದಿದೆ, ನಾನು ಸೋತಿದ್ದೇನೆ… ನನ್ನ ಧೈರ್ಯ ಎಲ್ಲವೂ ಮುರಿದುಹೋಗಿದೆ, ನನಗೆ ಈಗ ಹೆಚ್ಚಿನ ಶಕ್ತಿ ಇಲ್ಲ. ಗುಡ್ಬೈ ವ್ರೆಸ್ಲಿಂಗ್ 2001-2024… ಎಂದು ಫೋಗಟ್ ತನ್ನ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಮಂಗಳವಾರ ರಾತ್ರಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಫೋಗಾಟ್ 5-0 ಅಂತರದಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಅವರನ್ನು ಸೋಲಿಸಿ ಚಿನ್ನದ ಪದಕಕ್ಕೆ ಲಗ್ಗೆ ಇಟ್ಟಿದ್ದರು. ಅವರು ಚಿನ್ನದ ಪದಕಕ್ಕಾಗಿ ಯುನೈಟೆಡ್ ಸ್ಟೇಟ್ಸ್ನ ಸಾರಾ ಆನ್ ಹಿಲ್ಡೆಬ್ರಾಂಡ್ ವಿರುದ್ಧ ಸ್ಪರ್ಧಿಸಲು ಸಿದ್ಧರಾಗಿದ್ದರು. ಆದರೆ ಅಷ್ಟರಲ್ಲಾಗಲೇ ಅವರ ತೂಕ ನಿಯಮದ ಮಿತಿಗಿಂತ 100 ಗ್ರಾಂ ಏರಿಕೆ ಆಗಿತ್ತು. ಹೀಗಾಗಿ ತೂಕದ ಮಿತಿ ಉಲ್ಲಂಘಿಸಿದ್ದಕ್ಕಾಗಿ ಬುಧವಾರ ಅವರನ್ನು ಪ್ಯಾರಿಸ್ ಒಲಿಂಪಿಕ್ಸ್ನಿಂದ ಅನರ್ಹಗೊಳಿಸಲಾಗಿತ್ತು.
ಫೋಗಟ್ ಬುಧವಾರ ತಮ್ಮ ಅನರ್ಹತೆಯ ನಂತರ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಸಿಎಎಸ್‌ಗೆ ಮೇಲ್ಮನವಿ ಕೂಡಾ ಸಲ್ಲಿಸಿದ್ದಾರೆ. IOA ಮೂಲದ ಪ್ರಕಾರ, ಫೋಗಟ್ ಸಿಎಎಸ್‌ಗೆ ಬೆಳ್ಳಿ ಪದಕವನ್ನು ನೀಡುವಂತೆ ವಿನಂತಿಸಿದ್ದಾರೆ. ಗುರುವಾರ ಬೆಳಗ್ಗೆ ತೀರ್ಪು ಬರುವ ನಿರೀಕ್ಷೆ ಇದೆ.