Monday, December 2, 2024
Google search engine

Homeಕ್ಯಾಂಪಸ್ ಕಲರವಬರವಣಿಗೆಯನ್ನು ಎಳವೆಯಲ್ಲೇ ರೂಢಿಸಿಕೊಳ್ಳಬೇಕು: ಖ್ಯಾತ ಸಾಹಿತಿ ಶ್ರೀ ಎಸ್ ಎಲ್ ಭೈರಪ್ಪ

ಬರವಣಿಗೆಯನ್ನು ಎಳವೆಯಲ್ಲೇ ರೂಢಿಸಿಕೊಳ್ಳಬೇಕು: ಖ್ಯಾತ ಸಾಹಿತಿ ಶ್ರೀ ಎಸ್ ಎಲ್ ಭೈರಪ್ಪ

ಪಾಠ ಶಾಲಾ ಜೀವನ ಯಾತ್ರಾ- ಪೂರ್ಣ ಚೇತನ ಶಾಲೆಯ ಮಕ್ಕಳು ಬರೆದಿರುವ ಪುಸ್ತಕ : ಖ್ಯಾತ ಸಾಹಿತಿ ಶ್ರೀ ಎಸ್ ಎಲ್ ಭೈರಪ್ಪರವರಿಂದ ಬಿಡುಗಡೆ

ಮೈಸೂರು: ಬರವಣಿಗೆಯ ಕಲೆ ನಾವು ಯಾವುದೇ ಕ್ಷೇತ್ರವನ್ನು ಆಯ್ದು ಕೊಂಡರೂ ಅಗತ್ಯ. ಎಳವೆಯಲ್ಲೇ ಮಕ್ಕಳು ಬರೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಖ್ಯಾತ ಸಾಹಿತಿ ಶ್ರೀ ಎಸ್ ಎಲ್ ಭೈರಪ್ಪ ಅಭಿಪ್ರಾಯಪಟ್ಟಿದ್ದಾರೆ.

ನಗರದ ಪೂರ್ಣ ಚೇತನ ಶಾಲೆಯ ಮಕ್ಕಳೇ ಬರೆದು, ಸಂಪಾದಿಸಿರುವ “ಪಾಠ ಶಾಲಾ ಜೀವನ ಯಾತ್ರಾ” ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಶಾಲೆಯ ನಾಲ್ಕರಿಂದ ಹತ್ತನೇ ತರಗತಿಯವರೆಗಿನ 104 ವಿದ್ಯಾರ್ಥಿಗಳು ತಮ್ಮ ಬದುಕಿನ ಸಣ್ಣ ಸಣ್ಣ ಅನುಭವಗಳು, ಪ್ರವಾಸ, ಸೃಜನಶೀಲ ಆಲೋಚನೆಗಳು, ತಮ್ಮನ್ನು ಪ್ರಭಾವಿಸಿದ ಸಂಗತಿಗಳು-ವ್ಯಕ್ತಿಗಳ ಬಗ್ಗೆ ಬರೆದಿರುವ 189 ಲೇಖನಗಳ ಗುಚ್ಛ ಈ ಪುಸ್ತಕ . ಕೌಟುಂಬಿಕ ಬಾಂಧವ್ಯದ ಬೆಚ್ಚನೆಯ ಅನುಭವ, ಕೌತುಕಕಾರಿ ಜೀವ ವೈವಿಧ್ಯ, ಅಜ್ಜ ಕಟ್ಟಿಕೊಟ್ಟ ಅನುಭವದ ಬುತ್ತಿ, ಹೆತ್ತವರೇ ನಮ್ಮ ಮೊದಲ ಗುರುಗಳು, ಗೆಳೆತನವೆಂಬ ನಿಜ ಉಡುಗೊರೆ, ವಿಜ್ಞಾನ ಲೋಕ, ನನ್ನ ಅಪ್ಪ- ನನ್ನ ಹೀರೊ, ಮೌಲ್ಯಯುತ ಶಿಕ್ಷಣದ ಪ್ರಾಮುಖ್ಯತೆ, ಶಾಲೆಯಲ್ಲಿ ಕಲಿತ ಜೀವನ ಪಾಠಗಳು, ಪಠ್ಯಪುಸ್ತಕದಾಚೆಗಿನ ವಿಶಿಷ್ಟ ಲೋಕ, ಅಮ್ಮನ ನಿಸ್ವಾರ್ಥದ ಲೋಕ, ಆಟೋಟ ಕೂಟಗಳು ಕಲಿಸುವ ಪಾಠ, ಪ್ರಕೃತಿಯ ಪಾಠಗಳು, ಶಾಲೆ ರೂಪಿಸಿದ ನನ್ನ ವ್ಯಕ್ತಿತ್ವ, ಗುರುಗಳು ತೋರುವ ಆದರ್ಶದ ಹಾದಿ, ಹೀಗೆ, ಶಾಲೆಯ ವಿದ್ಯಾರ್ಥಿಗಳು, ತಮ್ಮ ಮುಗ್ದ ಭಾವನೆ-
ಅನುಭವಗಳಿಗೆ ಈ ಪುಸ್ತಕದಲ್ಲಿ ಅಕ್ಷರ ರೂಪ ನೀಡಿದ್ದಾರೆ.

ಈ ಪುಸ್ತಕದ ಇನ್ನೊಂದು ವಿಶಿಷ್ಟತೆ ಎಂದರೆ ಇದಕ್ಕೆ ಪ್ರತಿಷ್ಠಿತ ಐ ಎಸ್ ಬಿ ಎನ್ ಸಂಖ್ಯೆ ಕೂಡಾ ದೊರೆತಿದೆ. ಇದು ಈ ಪುಸ್ತಕದ ಗುಣಮಟ್ಟಕ್ಕೆ ಇನ್ನೊಂದು ಸಾಕ್ಷಿ. ಐ ಎಸ್ ಬಿ ಎನ್ ಸಂಖ್ಯೆ ದೊರೆತ ಮೊಟ್ಟಮೊದಲ ನಗರದ ಮಕ್ಕಳ ಪ್ರಕಟನೆ ಇದಾಗಿದೆ.

“ಎಳವೆಯಲ್ಲೇ ಮಕ್ಕಳಿಗೆ ಬರೆಯಲು ಒಂದು ವೇದಿಕೆ ಒದಗಿಸಿಕೊಟ್ಟರೆ, ಮಕ್ಕಳಿಗೆ ಅವರ ಸೃಜನಾತ್ಮಕ ಆಲೋಚನೆಗಳನ್ನು ಅಕ್ಷರ ರೂಪಕ್ಕಿಸಲು ಸಹಾಯವಾಗುತ್ತದೆ.

ವೈದ್ಯಕೀಯ, ಇಂಜಿನಿಯರಿಂಗ್, ವಿಜ್ಞಾನ, ಹೀಗೆ ನೀವು ಭವಿಷ್ಯದಲ್ಲಿ ಯಾವುದೇ ಉದ್ಯೋಗ್ಯ ಕ್ಷೇತ್ರ ಆಯ್ದುಕೊಳ್ಳಿ. ಬರವಣಿಗೆ ನಿಮ್ಮ ಉಪಯೋಗಕ್ಕೆ ಬರುತ್ತದೆ ಎಂದು,” ಭೈರಪ್ಪ ಅಭಿಪ್ರಾಯಪಟ್ಟರು.

ಶಾಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಬಿ ದರ್ಶನ್ ರಾಜ್ ಮಾತನಾಡಿ, “ಅಕ್ಷರಗಳ ಅದ್ಭುತಲೋಕ, ನಮ್ಮ ಮಕ್ಕಳ ಯೋಚನೆಯ ಪರಿಧಿಯನ್ನು ವಿಸ್ತರಿಸುತ್ತದೆ. ಅವರನ್ನು ಭವಿಷ್ಯದಲ್ಲಿ ಹೆಚ್ಚು ಸೃಜನಾತ್ಮಕವಾಗಿ ಯೋಚಿಸುವಂತೆ ಮಾಡುತ್ತದೆ” ಎಂದು ಅಭಿಪ್ರಾಯಪಟ್ಟರು.

“ಸರಸ್ವತಿ ದೇವತೆಯ ವರಪುತ್ರ ಶ್ರೀ ಎಸ್ ಎಲ್ ಭೈರಪ್ಪನವರು ನಮ್ಮ ಮಕ್ಕಳ ಪುಸ್ತಕ ಬಿಡುಗಡೆಗೊಳಿಸಿ ಆಶೀರ್ವದಿಸಿರುವುದು ಎಲ್ಲರ ಸೌಭಾಗ್ಯ,” ಎಂದು ಅವರು ಅಭಿಪ್ರಾಯಪಟ್ಟರು.
“ನಮ್ಮ ವಿದ್ಯಾರ್ಥಿಗಳಿಗೆ ಭೈರಪ್ಪನವರ ಬದುಕು-ಬರವಣಿಗೆ ಸದಾ ಆದರ್ಶಪ್ರಾಯ,” ಎಂದು ಅವರು ತಿಳಿಸಿದರು.

ಶಾಲೆಯ ಮುಖ್ಯ ಆಡಳಿತಾಧಿಕಾರಿ ಮಾಧುರ್ಯ ರಾಮಸ್ವಾಮಿ ಮಾತನಾಡಿ “ಶಾಲೆ ತನ್ನ ವಿದ್ಯಾರ್ಥಿಗಳ ಸೃಜನಾತ್ಮಕ ಯೋಚನೆಗಳಿಗೆ ಬೆಂಬಲವಾಗಿ ನಿಲ್ಲಲು ಈ ಪುಸ್ತಕವನ್ನು ಪ್ರಕಟಿಸಿದೆ. ಮುಂದಿನ ದಿನಗಳಲ್ಲಿ, ಮಕ್ಕಳ ಸೃಜನಾತ್ಮಕ ಬೆಳವಣಿಗೆಗೆ ಒತ್ತು ನೀಡುವ ಇನ್ನಷ್ಟು ಪ್ರಯತ್ನಗಳಿಗೆ ಶಾಲೆ ವೇದಿಕೆ ಒದಗಿಸಲಿದೆ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲೆ ಪ್ರಿಯಾಂಕಾ ಬಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular