ಯಳಂದೂರು: ತಾಲೂಕಿನ ವೈ.ಕೆ.ಮೋಳೆ ಗ್ರಾಮದ ಪರಿಶಿಷ್ಟ ಜಾತಿಯ ಬಡಾವಣೆಯ ಸರ್ವೇ ನಂ. ೫೪೩ ರಲ್ಲಿ ೨.೦೩ ಗುಂಟೆ ಇರುವ ಜಮೀನಿನಲ್ಲಿ ನಿರ್ಮಾಣ ಮಾಡುತ್ತಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನದ ಕಾಮಗಾರಿಗೆ ವಿನಾ ಕಾರಣ ಪೊಲೀಸರು ಬಂದು ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು, ನೆನ್ನೆ ರಾತ್ರಿ ಪಟ್ಟಣ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಈ ಸ್ಥಳದಲ್ಲಿ ೧೦೦x೧೫೦ ಅಡಿ ಜಾಗವನ್ನು ಸಮಾಜ ಕಲ್ಯಾಣ ಇಲಾಖೆಗೆ ನೀಡಲಾಗಿದೆ. ಇಲ್ಲಿ ೩೭ ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಇದಕ್ಕೆ ಇದೇ ಗ್ರಾಮದ ಮಹದೇವಶೆಟ್ಟಿ, ದೊಡ್ಡಪುಟ್ಟ ಎಂಬುವವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದೇವೆ ಈ ಕಾಮಗಾರಿಯನ್ನು ನಿಲ್ಲಿಸಿ ಎಂದು ಪೊಲೀಸರ ಮೊರೆ ಹೋಗಿರುತ್ತಾರೆ. ಪೊಲೀಸರು ಇಲ್ಲಿಗೆ ಪದೇ ಪದೇ ಬಂದು ನಡೆಯುತ್ತಿರುವ ಕಾಮಗಾರಿಯನ್ನು ತಡೆದಿದ್ದಾರೆ. ಹಾಗಾಗಿ ಈ ಕಾಮಗಾರಿ ವಿಳಂಬವಾಗುತ್ತಿದೆ.
ಆದರೆ ಈ ತಡೆಯಾಜ್ಞೆ ಸರ್ವೇ ನಂ. ೧೪೯ ರ ಸ್ಥಳಕ್ಕೆ ತಂದಿರುತ್ತಾರೆ. ಇದಕ್ಕೂ ಈಗ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ಸರ್ವೇ ಮಾಡಿಸಿ, ನಮ್ಮ ಸ್ಥಳದಲ್ಲಿ ನಾವು ಸಮುದಾಯ ಭವನ ನಿರ್ಮಿಸಿಕೊಳ್ಳುತ್ತಿದ್ದರೂ ನಗೆ ವಿನಾ ಕಾರಣ ಕಿರುಕುಳ ನೀಡಲಾಗುತ್ತಿದೆ ಎಂದು ನಾವು ಎಷ್ಟೆ ಮನವಿ ಮಾಡಿದರೂ ಪೊಲೀಸರು ಸ್ಪಂಧಿಸುತ್ತಿಲ್ಲ. ಅಲ್ಲದೆ ಇದನ್ನು ಪ್ರಶ್ನಿಸಿದರೆ ನಮಗೆ ನಮ್ಮೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಟವರ್ ಕಾಮಗಾರಿ ಕೈಬಿಡಿ: ಅಲ್ಲದೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಖಾಸಗಿ ಮೊಬೈಲ್ ಕಂಪೆನಿಯವರು ಟವರ್‌ನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ಗ್ರಾಮಸ್ಥರ ನಡುವೆಯೇ ಇದ್ದು ಗ್ರಾಮದ ಮಕ್ಕಳು, ವೃದ್ಧರು, ಮತ್ತು ಹಕ್ಕಿ ಪಕ್ಷಿಗಳೂ ಸೇರಿದಂತೆ ಜೀವ ಸಂಕುಲಕ್ಕೆ ವಿಕಿರಣ ಸೋರಿಕೆಯಿಂದ ಮಾರಕವಾಗಿ ಪರಿಣಮಿಸುವ ಸಂಭವವಿದೆ. ಹಾಗಾಗಿ ಈ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಸಿಪಿಐ ಶಿವರಾಜ್‌ಮುಧೋಳ್ ಹಾಗೂ ಪಿಎಸ್‌ಐ ಚಂದ್ರಹಾಸ್ ನಾಯಕ್, ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಹಾಗೂ ಮೊಬೈಲ್ ಟವರ್‌ನ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡದ ಮೇಲೆ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಎನ್. ಬುಲೆಟ್ ಸಿದ್ದರಾಜು, ಎಂ. ಮಂಜುನಾಥ್, ಡಿ. ದೊರೆಸ್ವಾಮಿ, ವಿ. ಮಹೇಶ್, ರಂಗಸ್ವಾಮಿ, ಕೃಷ್ಣಯ್ಯ, ಮಲ್ಲಯ್ಯ, ನಂಜುಂಡಸ್ವಾಮಿ, ಟಿ. ಮಹದೇವಸ್ವಾಮಿ, ಬಸವರಾಜು, ರಂಗಸಿ ಸೇರಿದಂತೆ ಇತರರು ಹಾಜರಿದ್ದರು